ಶಕ್ತಿ ಯೋಜನೆಗೆ ಕನ್ನ ಹಾಕಿ ಪುರುಷರಿಗೂ ಉಚಿತ ಟಿಕೆಟ್‌ ನೀಡಿ ದುಡ್ಡು ಮಾಡಿದ ಬಿಎಂಟಿಸಿ ಕಂಡಕ್ಟರ್‌ಗಳು!



(ನ್ಯೂಸ್ ಕಡಬ) newskadaba.com, ಎ.13: ಮಹಾನಗರ ಸಾರಿಗೆ ಸಂಸ್ಥೆ (BMTC) ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆ ದುರುಪಯೋಗವಾಗಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಈ ಯೋಜನೆಯನ್ನು ಕೆಲವು ನಿರ್ವಾಹಕರು (ಕಂಡಕ್ಟರ್‌ಗಳು) ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮದಲ್ಲಿ ಭಾಗಿಯಾಗಿದ್ದ ಐವರು ಕಂಡಕ್ಟರ್‌ಗಳನ್ನು ತಕ್ಷಣ ಅಮಾನತುಗೊಳಿಸಲಾಗಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.
ಶಕ್ತಿ ಯೋಜನೆಯ ದುರುಪಯೋಗ ಹೇಗೆ?
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಬಿಎಂಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿದೆ. ಈ ಯೋಜನೆಯ ಟಿಕೆಟ್‌ಗಳ ಮೇಲೆ “ಉಚಿತ ಪ್ರಯಾಣ, ಕೇವಲ ಮಹಿಳೆಯರಿಗೆ ಮಾತ್ರ” ಎಂಬುದು ಕನ್ನಡದಲ್ಲಿ ಸ್ಪಷ್ಟವಾಗಿ ಮುದ್ರಿಸಲಾಗಿದೆ. ಆದರೆ, ಈ ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಂಡ ಕೆಲವು ಕಂಡಕ್ಟರ್‌ಗಳು ಕನ್ನಡ ಓದಲು ಬಾರದ ಪುರುಷ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರಿಗೆ ಮಹಿಳೆಯರ ಉಚಿತ ಟಿಕೆಟ್ ನೀಡಿದಂತೆ ತೋರಿಸಿ, ನಗದು ಅಥವಾ ಯುಪಿಐ ಮೂಲಕ ಹಣ ವಸೂಲಿ ಮಾಡಲಾಗುತ್ತಿತ್ತು. ಈ ಮೂಲಕ ನಿಗಮಕ್ಕೆ ಸೇರುವ ಆದಾಯವನ್ನು ತಡೆದು, ಅದನ್ನು ತಮ್ಮ ಖಾಸಗಿ ಖಾತೆಗಳಿಗೆ ವರ್ಗಾಯಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಪ್ರಯಾಣಿಕರ ಯುಪಿಐ ಕ್ಯೂಆರ್ ಕೋಡ್ ದುರುಪಯೋಗ
ಅನುಕೂಲಕ್ಕಾಗಿ ಬಿಎಂಟಿಸಿ ಬಸ್ಸುಗಳಲ್ಲಿ ಅಧಿಕೃತ ಯುಪಿಐ ಕ್ಯೂಆರ್ ಕೋಡ್‌ಗಳನ್ನು ಅಳವಡಿಸಲಾಗಿದೆ. ಆದರೆ, ಆರೋಪಿತ ಕಂಡಕ್ಟರ್‌ಗಳು ಬಸ್ ಡಿಪೋದಿಂದ ಹೊರಟ ಕೂಡಲೇ ಆ ಅಧಿಕೃತ ಕ್ಯೂಆರ್ ಕೋಡ್‌ಗಳನ್ನು ತೆಗೆದು ಇಟ್ಟುಕೊಳ್ಳುತ್ತಿದ್ದರು. ನಂತರ ಪ್ರಯಾಣಿಕರು ಡಿಜಿಟಲ್ ಪಾವತಿ ಮಾಡಲು ಮುಂದಾದಾಗ, ತಮ್ಮ ವೈಯಕ್ತಿಕ ಮೊಬೈಲ್‌ನಲ್ಲಿರುವ ಕ್ಯೂಆರ್ ಕೋಡ್ ತೋರಿಸಿ, ಹಣವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಳ್ಳುತ್ತಿದ್ದರು. ಈ ರೀತಿಯಾಗಿ ನಿಗಮಕ್ಕೆ ಬರಬೇಕಿದ್ದ ಹಣ ಸಂಪೂರ್ಣವಾಗಿ ಅವರ ಕೈಗೆ ಸೇರುತ್ತಿತ್ತು.







error: Content is protected !!
Scroll to Top