ಪಿಯುಸಿ ಫಲಿತಾಂಶ ದಿನವೇ ವಿದ್ಯಾರ್ಥಿನಿ ನಿಗೂಢ ಮೃತ್ಯು,ತಾಯಿಯ ಮೇಲೇ ಶಂಕೆ



(ನ್ಯೂಸ್ಕಡಬ) newskadaba.com  ,ಎ10: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ದಿನವೇ ಬೆಂಗಳೂರಿನ ಹೆಬ್ಬಾಳದ ಮನೋರಾಯನಪಾಳ್ಯದಲ್ಲಿ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ತನುಶ್ರೀ (18) ಮೃತಪಟ್ಟ ವಿದ್ಯಾರ್ಥಿನಿ. ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ತಾಯಿ ಮಾಹಿತಿ ನೀಡಿದ್ದಾರೆ. ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಂಡುಬಂದಿದೆ. ಆದರೆ, ಸಂಬಂಧಿಕರು ಮಾತ್ರ ವಿದ್ಯಾರ್ಥಿನಿಯ ತಾಯಿಯ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.







ಗುರುವಾರ (ಏಪ್ರಿಲ್ 9) ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಪಿಯುಸಿ ಫಲಿತಾಂಶದಲ್ಲಿ ಅನುತ್ತೀರ್ಣಳಾದ ಕಾರಣ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ಆಶಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮೃತದೇಹವನ್ನು ಕೆ.ಜಿ. ಹಳ್ಳಿಯ ಅಂಬೇಡ್ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇರಿಸಲಾಗಿದೆ.






ಸಂಬಂಧಿಕರ ಅನುಮಾನಕ್ಕೆ ಕಾರಣವೇನು?

ಈ ಪ್ರಕರಣದಲ್ಲಿ ತಾಯಿ ಆಶಾ ಅವರ ನಡವಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿದ್ದರೂ, ರಾತ್ರಿ 10 ಗಂಟೆಯವರೆಗೂ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅಷ್ಟೇ ಅಲ್ಲದೆ, ಪೊಲೀಸರಿಗೆ ತಿಳಿಸದೆಯೇ 4-5 ಯುವಕರ ಸಹಾಯದಿಂದ ತಾಯಿಯೇ ಮೃತದೇಹವನ್ನು ಕೆಳಕ್ಕೆ ಇಳಿಸಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಘಟನೆ ನಡೆದು 8 ಗಂಟೆಗಳ ಕಾಲ ಮಾಹಿತಿ ಮುಚ್ಚಿಟ್ಟಿರುವುದು ಯಾಕೆ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ. ತಾಯಿಯೇ ಮಗಳನ್ನು ಕೊಂದು ನೇಣು ಹಾಕಿರಬಹುದು ಎಂದು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದು, ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಸಹೋದರನ ಹೇಳಿಕೆ ಮೂಡಿಸಿದ ಸಂಶಯ

ತನುಶ್ರೀ ತಾಯಿ ಆಶಾ ನನಗೆ ಚಿಕ್ಕಮ್ಮ ಆಗಬೇಕು. ತನುಶ್ರೀ ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿ ಅಲ್ಲ. ಮಾನಸಿಕವಾಗಿ ಬಹಳ ಸ್ಟ್ರಾಂಗ್ ಆಗಿರುವ ಹೆಣ್ಣು ಮಗಳು. ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂದರೆ ನಾವು ನಂಬಲ್ಲ ಎಂದು ಮೃತ ವಿದ್ಯಾರ್ಥಿನಿಯ ಸಹೋದರ ಧನುಷ್ ಎಂಬಾತ ಅನುಮಾನ ವ್ಯಕ್ತಪಡಿಸಿದ್ದಾನೆ. ನಮಗೆ ಅವಳ ತಾಯಿ ಆಶಾ ಮೇಲೆ ಅನುಮಾನ ಇದೆ. ತನುಶ್ರೀ ತಂದೆ ಎರಡು ವರ್ಷದ ಹಿಂದೆ ಮೃತಪಟ್ಟಿದ್ದರು. ಅವರಪ್ಪ ಸತ್ತಿದ್ದೇ ಚಿಕ್ಕಮ್ಮಳ ಅನೈತಿಕ ಸಂಬಂಧದ ವಿಚಾರ ಗೊತ್ತಾಗಿ. ಈಗಲೂ ಅವರಿಗೆ ಅನೈತಿಕ ಸಂಬಂಧ ಇದೆ ಎಂದು ಆತ ಹೇಳಿದ್ದಾನೆ.

ಚಿಕ್ಕಮ್ಮಳ ಅನೈತಿಕ ಸಂಬಂಧದ ವಿಚಾರವಾಗಿ ಮನೆಯಲ್ಲಿ ಹಲವು ಬಾರಿ ಗಲಾಟೆ ಆಗಿದೆ. ಇದೇ ಕಾರಣಕ್ಕೆ ತನುಶ್ರೀಯನ್ನ ಕೊಲೆ ಮಾಡಿರುವ ಅನುಮಾನ ಇದೆ. ಘಟನೆ ನಡೆದು ಎಂಟು ತಾಸಾದರೂ ಮಾಹಿತಿ ನೀಡಿಲ್ಲ. ಆಸ್ಪತ್ರೆಗೆ ಹೋದ ಬಳಿಕ ಅಲ್ಲಿಂದ ಪೊಲೀಸರಿಗೆ ಮಾಹಿತಿ ಹೋಗಿದೆ. ನಮ್ಮ ತಂಗಿಗೆ ಏನಾಯ್ತು ಎಂಬುದರ ಸತ್ಯಾಂಶ ಗೊತ್ತಾಗಬೇಕು. ಆಶಾ ಬಗ್ಗೆಯೂ ತನಿಖೆ ಆಗಬೇಕು ಎಂದು ಆತ ಆಗ್ರಹಿಸಿದ್ದಾನೆ.

error: Content is protected !!
Scroll to Top