ಬೆಳ್ತಂಗಡಿ : ತುಳುನಾಡಿನ ಅದ್ಭುತ ಸಂಪ್ರದಾಯ – ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದ ‘ದಲ್ಯ ಸೇವೆ’



(ನ್ಯೂಸ್‌ ಕಡಬ) newskadaba.com,  .08:    ದಕ್ಷಿಣ ಕನ್ನಡ ಜಿಲ್ಲೆ ಎಂದರೆ ದೈವಗಳ ನಾಡು. ಇಲ್ಲಿ ದೈವಾರಾಧನೆ, ನಾಗಾರಾಧನೆಗಳಷ್ಟೇ ಪವಿತ್ರವಾಗಿರುವ ಸಿರಿ ಆರಾಧನೆ ಬಹಳಷ್ಟು ಪವಿತ್ರವಾದದ್ದು. ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ನಿಡಿಗಲ್ ಲೋಕನಾಡು ಲೋಕನಾಥೇಶ್ವರ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಸಿರಿ ಜಾತ್ರೆ ಸಾವಿರಾರು ಭಕ್ತರನ್ನು ಆಕರ್ಷಿಸಿದೆ.







ಸಂಜೆಯಾಗುತ್ತಿದ್ದಂತೆ ಕ್ಷೇತ್ರಕ್ಕೆ ಭಕ್ತರ ಸಾಗರ ಹರಿದು ಬಂದಿದ್ದು, ರಾತ್ರಿಯಾಗುತ್ತಿದ್ದಂತೆ ವಿಶೇಷ ಪೂಜಾ ವಿಧಿಗಳು ಆರಂಭವಾದವು. ಶುಭ್ರ ಬಿಳಿ ಸೀರೆ ಧರಿಸಿ, ತಲೆತುಂಬ ಮಲ್ಲಿಗೆ ಹೂವು ಮುಡಿದ ಮಹಿಳೆಯರು ಸಾಲು ಸಾಲಾಗಿ ನಿಂತು ‘ಸಿರಿಗಳು’ ಆಗಿ ಆವೇಶಗೊಳ್ಳುವ ದೃಶ್ಯ ಭಕ್ತಿಭಾವವನ್ನು ಮತ್ತಷ್ಟು ಗಾಢಗೊಳಿಸಿತು. ‘ಕುಮಾರ’ ಪಾತ್ರಿಗಳ ಮಾರ್ಗದರ್ಶನದಲ್ಲಿ ನಡೆದ ಈ ಆಚರಣೆ ಸಂಪೂರ್ಣ ವಾತಾವರಣವನ್ನು ದೈವೀಮಯವಾಗಿಸಿತು.






ಈ ಜಾತ್ರೆಯ ಪ್ರಮುಖ ಆಕರ್ಷಣೆಯಾದ ‘ದಲ್ಯ ಸೇವೆ’ ನೋಡುಗರನ್ನು ಅಚ್ಚರಿಗೊಳಿಸಿತು. ನೆಲದ ಮೇಲೆ ಬಿಳಿ ಬಟ್ಟೆ ಹಾಸಿ, ಸಿರಿ ಸಂಧಿಯ ಪುರಾಣ ಕಥನಗಳನ್ನು ಗಾನ ರೂಪದಲ್ಲಿ ಹಾಡುತ್ತಾ, ಅಳುತ್ತಾ, ಮೈಮರೆತು ಭಾಗವಹಿಸುವ ಈ ಆಚರಣೆ ಭಕ್ತರ ಮನಸ್ಸನ್ನು ತಟ್ಟುವಂತಿತ್ತು.

ಇದರ ಜೊತೆಗೆ, ಪುರಾಣ ಪ್ರಸಿದ್ಧ ಅಬ್ಬಗ-ದಾರಗರ ಸಹೋದರಿಯರ ‘ಚೆನ್ನೆಮಣೆ’ ಆಟವನ್ನು ಮರುನಿರೂಪಿಸುವ ವಿಶಿಷ್ಟ ಕಾರ್ಯಕ್ರಮವೂ ನಡೆಯಿತು. ಪ್ರತೀ ವರ್ಷದಂತೆ ಈ ಬಾರಿಯೂ ಸಾವಿರಾರು ಭಕ್ತರು ಈ ಅಪರೂಪದ ಸಂಪ್ರದಾಯಕ್ಕೆ ಸಾಕ್ಷಿಯಾದರು. ತುಳುನಾಡಿನ ನಂಬಿಕೆ, ಸಂಸ್ಕೃತಿ ಮತ್ತು ಪರಂಪರೆಯ ಸೊಬಗು ಈ ಸಿರಿ ಜಾತ್ರೆಯಲ್ಲಿ ಮತ್ತೊಮ್ಮೆ ಮೂಡಿಬಂದಿತು.

ಸಿರಿ ಜಾತ್ರೆ ತುಳುವರಿಗೆ ಅತ್ಯಂತ ಪವಿತ್ರವಾಗಿದ್ದು, ತಮ್ಮ ಕುಲದೇವರಿಗೆ ಹರಕೆ ಸಲ್ಲಿಸುವ ಮಹತ್ವದ ಆಚರಣೆ ಎನ್ನಲಾಗುತ್ತದೆ. ಇಂತಹ ಜಾತ್ರೆಗಳು ನಡೆಯುವ ಸ್ಥಳಗಳನ್ನು ‘ಆಲಡೆ’ ಎಂದು ಕರೆಯಲಾಗುತ್ತದೆ. ತುಳುನಾಡಿನಲ್ಲಿ ಸುಮಾರು 80ಕ್ಕೂ ಹೆಚ್ಚು ಸಿರಿ ಆಲಡೆಗಳಿವೆ ಎನ್ನುವುದು ಅಂದಾಜು.

error: Content is protected !!
Scroll to Top