(ನ್ಯೂಸ್ ಕಡಬ) newskadaba.comwಎ.03: ಇನ್ಫೋಸಿಸ್ ಸಂಸ್ಥೆಯ ಹಿರಿಯ ಅಧಿಕಾರಿಗಳಂತೆ ನಟನೆ ಮಾಡಿ ಸುಮಾರು 6.3 ಕೋಟಿ ರೂಪಾಯಿ ವಂಚನೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೈಸೂರು ಮರ್ಕಂಟೈಲ್ ಕಂಪನಿ ನೀಡಿದ ದೂರಿನ ಪ್ರಕಾರ, ಗಗನ್ ಎಂಬಾತ ತಾನು ಇನ್ಫೋಸಿಸ್ ಸಂಸ್ಥೆಯ ಸಿಎಸ್ಆರ್ ಪ್ರಾದೇಶಿಕ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿ ವಿಶ್ವಾಸ ಗಳಿಸಿದ್ದಾನೆ. ಆತ ತಾನು ಹಿರಿಯ ಅಧಿಕಾರಿಗಳಾದ ನಿಲಾದ್ರಿ ಪ್ರಸಾದ್ ಮಿಶ್ರಾ ಮತ್ತು ಹರ್ಷ್ ಜೆ ಅವರಿಗೆ ನೇರವಾಗಿ ವರದಿ ಮಾಡುತ್ತೇನೆ ಎಂದು ನಂಬಿಕೆ ಮೂಡಿಸಿದ್ದ ಎಂದು ಆರೋಪಿಸಲಾಗಿದೆ.
ಇದೇ ವೇಳೆ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ಗೆ ಭಾರೀ ಅನುದಾನ ನೀಡುವುದಾಗಿ ಹೇಳಿ ಆರೋಪಿಗಳು ವಿಶ್ವಾಸ ಗಳಿಸಿದ್ದಾರೆ. ನಂಬಿಕೆ ಹೆಚ್ಚಿಸಲು ಉಡುಪಿ ಹಾಗೂ ಮಂಗಳೂರು ಭಾಗಗಳಿಗೆ ನಕಲಿ ಪರಿಶೀಲನಾ ತಂಡವನ್ನೂ ಕಳುಹಿಸಿ, ಟ್ರಸ್ಟ್ ಚಟುವಟಿಕೆಗಳ ಪರಿಶೀಲನೆ ನಡೆಸಲಾಗಿದೆ.
ಅನುದಾನ ಬಿಡುಗಡೆಗಿಂತ ಮೊದಲು ಅರ್ನೆಸ್ಟ್ ಮನಿ ಡೆಪಾಸಿಟ್ (EMD) ಪಾವತಿಸಬೇಕೆಂದು ಒತ್ತಾಯಿಸಿ, ಕಂಪನಿಯಿಂದ ಹಂತ ಹಂತವಾಗಿ ಹಣ ಪಡೆದುಕೊಂಡಿದ್ದಾರೆ. 1.75 ಕೋಟಿ ರೂಪಾಯಿಯನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಅನಿತಾ ವೆಂಚರ್ಸ್‌ಗೆ, 3.75 ಕೋಟಿ ರೂಪಾಯಿಯನ್ನು ANS ಎಂಜಿನಿಯರಿಂಗ್ಸ್‌ಗೆ ವರ್ಗಾವಣೆ ಮಾಡಲಾಗಿದೆ. ಇದಲ್ಲದೆ, ದೇವನಹಳ್ಳಿಯ ನಂದಿ ಉಪಚಾರ ಹೋಟೆಲ್ ಸಮೀಪ ಆರೋಪಿಯ ಚಾಲಕನಿಗೆ 30 ಲಕ್ಷ ರೂಪಾಯಿ ನಗದು ನೀಡಲಾಗಿದ್ದು, ಇನ್ನೂ 50 ಲಕ್ಷ ರೂಪಾಯಿ ಬ್ಯಾಂಕ್ ಮುಖಾಂತರ ವರ್ಗಾವಣೆ ಮಾಡಲಾಗಿದೆ.
ವಂಚನೆಯನ್ನು ಮುಂದುವರಿಸಲು ಆರೋಪಿಗಳು ಕಳೆದ ಅಕ್ಟೋಬರ್ 21ರಂದು ಇನ್ಫೋಸಿಸ್ ಹಿರಿಯ ಉಪಾಧ್ಯಕ್ಷರ ಸಹಿ ಹೊಂದಿರುವ ನಕಲಿ ಮಂಜೂರಾತಿ ಪತ್ರವನ್ನೂ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಕರ್ನಾಟಕದಾದ್ಯಂತ ವಸತಿ ಯೋಜನೆಗಳಿಗೆ 179 ಕೋಟಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 178 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು.
ಆದರೆ ಅನುದಾನದ ಹಣ ಬರದೇ ಇರುವುದರ ಜೊತೆಗೆ ಗಗನ್ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ವಂಚನೆ ಬೆಳಕಿಗೆ ಬಂದಿದೆ. ತಕ್ಷಣವೇ ಕಂಪನಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆ ಮತ್ತು ಹಣದ ಹರಿವು ಕುರಿತು ತನಿಖೆ ಮುಂದುವರೆಸಿದ್ದಾರೆ.









