(ನ್ಯೂಸ್ ಕಡಬ) newskadaba.com ,ಮಾ.24 :ಹುಲಿ ಸೆರೆಗೆ ಕೈಗೊಂಡಿದ್ದ ‘ಆಪರೇಷನ್ ಬೀಸ್ಟ್ ’ ಕಾರ್ಯಾಚರಣೆಯ ಎರಡನೇ ಹಂತ ಯಶಸ್ವಿಯಾಗಿ ಮುಗಿದ ಬೆನ್ನಲ್ಲೇ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಅಪಾಯಕಾರಿಯ ಘಟನೆ ಸಂಭವಿಸಿರುವುದು ಬೆಳಕಿಗೆ ಬಂದಿದೆ.ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನ ಬೀಡು ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯ ವೇಳೆ, ಬಂಡೀಪುರ ಅರಣ್ಯ ಸಿಬ್ಬಂದಿ ಕೂಂಬಿಂಗ್ ಕಾರ್ಯದಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಅರಣ್ಯ ಸಿಬ್ಬಂದಿಯೊಬ್ಬರ ಜೀವಕ್ಕೆ ಅಪಾಯ ಎದುರಾದರೂ, ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ.
ಹುಲಿಗೆ ಅರವಳಿಕೆ (ಡಾರ್ಟ್) ನೀಡಿದ ಬಳಿಕ ಅದು ಸಂಪೂರ್ಣವಾಗಿ ಪ್ರಜ್ಞೆ ತಪ್ಪುವ ಮುನ್ನವೇ ಸೆರೆ ಹಿಡಿಯಲು ಸಿಬ್ಬಂದಿ ಮುಂದಾಗಿದ್ದರು. ನಿಯಮ ಪ್ರಕಾರ ಹಿರಿಯ ಅಧಿಕಾರಿಗಳು ಹಾಗೂ ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಮುಂದಿನ ಕ್ರಮ ಕೈಗೊಳ್ಳಬೇಕು. ಆದರೆ ಈ ಸಂದರ್ಭದಲ್ಲಿ ಆ ನಿಯಮಗಳನ್ನು ಕಡೆಗಣಿಸಿ ಆತುರದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಸಿಬ್ಬಂದಿ ಹತ್ತಿರ ಬರುತ್ತಿದ್ದಂತೆಯೇ ಗಾಬರಿಗೊಂಡ ಹುಲಿ ಅಚಾನಕ್ ಪ್ರತಿದಾಳಿ ನಡೆಸಿ, ಫಾರೆಸ್ಟ್ ಗಾರ್ಡ್ ಬಸವೇಗೌಡ ಅವರ ಮೇಲೆ ಹಲ್ಲೆ ನಡೆಸಿದೆ. ಹುಲಿಯ ದಾಳಿಯಿಂದ ಅವರಿಗೆ ಕೈಗೆ ಗಂಭೀರ ಗಾಯವಾಗಿದೆ. ಕಾರ್ಯಾಚರಣೆ ವೇಳೆ ಸ್ಥಳದಲ್ಲಿದ್ದ ಜನರ ಕೂಗಾಟ ಮತ್ತು ಗದ್ದಲದಿಂದ ಹುಲಿ ಇನ್ನಷ್ಟು ಆತಂಕಗೊಂಡಿದ್ದು, ಪರಿಸ್ಥಿತಿ ನಿಯಂತ್ರಣದಿಂದ ತಪ್ಪುವ ಹಂತಕ್ಕೇ ತಲುಪಿತ್ತು. ಅರವಳಿಕೆ ಮದ್ದು ನೀಡಿದ ಬಳಿಕವೂ ಪರಿಸ್ಥಿತಿ ಸಂಪೂರ್ಣವಾಗಿ ಸ್ಥಿರವಾಗಿರಲಿಲ್ಲ ಎಂಬುದು ತಿಳಿದುಬಂದಿದೆ. ಗಾಯಗೊಂಡ ಬಸವೇಗೌಡ ಅವರನ್ನು ತಕ್ಷಣವೇ ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಈ ಕಾರ್ಯಾಚರಣೆಯಲ್ಲಿ ಹಿರಿಯ ಅಧಿಕಾರಿಗಳು ಸ್ಥಳದಲ್ಲಿರಲಿಲ್ಲ ಎಂಬ ಆರೋಪವೂ ಕೇಳಿಬಂದಿದ್ದು, ಅರಣ್ಯ ಇಲಾಖೆಯ ಕಾರ್ಯವಿಧಾನಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಒಟ್ಟಿನಲ್ಲಿ, ಕಾಡುಪ್ರಾಣಿಗಳ ಸೆರೆ ಕಾರ್ಯಾಚರಣೆಯಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮ ಈ ಘಟನೆ ಸಂಭವಿಸಿದೆ. ಇಂತಹ ಅವಘಡಗಳು ಮರುಕಳಿಸದಂತೆ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.









