(ನ್ಯೂಸ್ ಕಡಬ)newskadaba.com ಮಾ. 14. ಇರಾನ್-ಇಸ್ರೇಲ್ ಯುದ್ದದ ಪರಿಣಾಮವಾಗಿ ರಾಜ್ಯದಾದ್ಯಂತ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕೊರತೆ ಹೆಚ್ಚುತ್ತಿರುವ ಹಿನ್ನೆಲೆ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದ್ದು, ಸಮಸ್ಯೆಗೆ ತುರ್ತು ಪರಿಹಾರ ಒದಗಿಸುವಂತೆ ಬೆಂಗಳೂರಿನ ಗಾಂಧಿನಗರದಲ್ಲಿರುವ ‘ರಸಪಾಕ’ ಹೋಟೆಲ್ ಮಾಲಕಿ ರೂಪಾ ಶಾಸ್ತ್ರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಕುರಿತು ವರದಿಯಾಗಿದೆ.
ವರದಿಯ ಪ್ರಕಾರ, ಕರ್ನಾಟಕದ ನಾರಿ ಶಕ್ತಿ ಪರವಾಗಿ ಪತ್ರ ಬರೆದಿರುವ ರೂಪಾ ಶಾಸ್ತ್ರಿ, ಕಳೆದ ಕೆಲವು ವಾರಗಳಿಂದ ವಾಣಿಜ್ಯ ಅಡುಗೆ ಅನಿಲದ ಕೊರತೆ ಮತ್ತು ಬೆಲೆ ಏರಿಕೆ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಸಿಲಿಂಡರ್ ಪೂರೈಕೆಯಲ್ಲಿ ಶೇ.50ಕ್ಕೂ ಹೆಚ್ಚು ಕಡಿತವಾಗಿರುವುದರಿಂದ ಹೋಟೆಲ್ ಗಳನ್ನು ನಡೆಸುವುದು ಕಷ್ಟಕರವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಮಹಿಳಾ ಉದ್ಯಮಿಗಳ ಅಲ್ಪ ಲಾಭಾಂಶ ಸಂಪೂರ್ಣವಾಗಿ ಕಡಿಮೆಯಾಗಿದ್ದು, ಈ ಉದ್ಯಮವನ್ನು ನಂಬಿ ಬದುಕುತ್ತಿರುವ ಸಾವಿರಾರು ಮಹಿಳಾ ಕಾರ್ಮಿಕರ ಜೀವನೋಪಾಯಕ್ಕೂ ಹೊಡೆತ ಬಿದ್ದಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹೀಗಾಗಿ ಕರ್ನಾಟಕದ ಹೋಟೆಲ್ ಉದ್ಯಮಕ್ಕೆ ವಾಣಿಜ್ಯ ಎಲ್ಪಿಜಿ ಪೂರೈಕೆಯನ್ನು ತಕ್ಷಣ ಸುಗಮಗೊಳಿಸಬೇಕು. ಮಹಿಳಾ ಉದ್ಯಮಿಗಳು ನಡೆಸುವ ಹೋಟೆಲ್ಗಳಿಗೆ ಗ್ಯಾಸ್ ಹಂಚಿಕೆಯಲ್ಲಿ ವಿಶೇಷ ಆದ್ಯತೆ ನೀಡಬೇಕು. ಜೊತೆಗೆ ಸಣ್ಣ ಹೋಟೆಲ್ ಗಳಿಗೆ ಸಬ್ಸಿಡಿ ಅಥವಾ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ಅವರು ಪ್ರಧಾನಿಗೆ ಮನವಿ ಮಾಡಿದ್ದಾರೆ.












