ಮನೆಗಳ್ಳತನ ಪ್ರಕರಣ- 12 ಗಂಟೆಯೊಳಗೆ ನಾಲ್ವರ ಬಂಧನ



(ನ್ಯೂಸ್ ಕಡಬ) newskadaba.com ಮಾ. 14. ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಘಟನೆ ನಡೆದ ಕೇವಲ 12 ಗಂಟೆಗಳ ಒಳಗೆ ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.





ಬಂಧಿತ ಆರೋಪಿಗಳನ್ನು ವಿಜಯಪುರ ಮೂಲದ ಸಂತೋಷ್ (20) ಮತ್ತು ಬಡನಿಡಿಯೂರು ನಿವಾಸಿ ಚಿರಂತನ್ (21) ಎಂದು ಗುರುತಿಸಲಾಗಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರನ್ನು ಕೂಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.






80 ಬಡಗಬೆಟ್ಟು ಗ್ರಾಮದ ಶಾಂತಿನಗರ ನಿವಾಸಿ ಸಂಗೀತ ಮಡಿವಾಳ ಎಂಬವರು ಮಾರ್ಚ್ 12ರಂದು ಬೆಳಗ್ಗೆ ತಮ್ಮ ಮನೆಗೆ ಬೀಗ ಹಾಕಿ ತಾಯಿ ಮನೆಗೆ ಹೋಗಿದ್ದು, ಮಧ್ಯಾಹ್ನ ವಾಪಸ್ ಬಂದು ನೋಡಿದಾಗ, ಕಳ್ಳರು ಮನೆಯ ಮೇಲ್ಛಾವಣಿಯ ಹೆಂಚುಗಳನ್ನು ತೆಗೆದು ಒಳನುಗ್ಗಿರುವುದು ಪತ್ತೆಯಾಗಿದೆ.

 

ಕಳ್ಳರು ಕಪಾಟಿನಲ್ಲಿದ್ದ ಚಿನ್ನ, ಬೆಳ್ಳಿ ಮತ್ತು ನಗದನ್ನು ದೋಚಿದ್ದರು. ಈ ಕುರಿತು ಸಂಗೀತ ಅವರು ನೀಡಿದ ದೂರಿನ ಮೇರೆಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು.

ಮಾರ್ಚ್ 13ರಂದು ಶೀಂಬ್ರ ಸೇತುವೆಯ ಬಳಿ ಸಂಶಯಾಸ್ಪದವಾಗಿ ನಿಂತಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ವಿಷಯ ಬೆಳಕಿಗೆ ಬಂದಿದೆ. ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ಅವರಿಂದ ಕಳವು ಮಾಡಲಾಗಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

error: Content is protected !!
Scroll to Top