ಜನಾಕರ್ಷಿಸುತ್ತಿರುವ ‘ಸರಸ್ ಮೇಳ’: ಇಂದು ಕೊನೆಯ ದಿನ



(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 28. ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಜ್ಯ ಜೀವನೋಪಾಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಹಾನಗರಪಾಲಿಕೆ ಆಶ್ರಯದಲ್ಲಿ ಆಯೋಜಿಸಿರುವ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನೋಡುಗರ ಗಮನ ಸೆಳೆಯುತ್ತಿದೆ. ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ ಈ ಮೇಳದಲ್ಲಿ, ವಿವಿಧ ರಾಜ್ಯ, ಜಿಲ್ಲೆಗಳ ಸ್ವಸಹಾಯ ಗುಂಪಿನ ಮಹಿಳೆಯರ ಕೌಶಲ್ಯಯುತ ಕೈಚಳಕವನ್ನು ಸರಸ್ ಮೇಳದಲ್ಲಿ ಕಾಣಬಹುದು. ಪ್ರತಿಯೊಂದು ಮಳಿಗೆಗಳಲ್ಲೂ ವಿಶೇಷವಾದ ವಸ್ತುಗಳ ಜೊತೆಗೆ ಕರಕುಶಲತೆಯನ್ನು ಗಮನಿಸಬಹುದು.
ಆಕರ್ಷಕ ಬಣ್ಣಗಳಿಂದ ಕೂಡಿದ ಚನ್ನಪಟ್ಟಣದ ಗೊಂಬೆಗಳು, ಸೌಂದರ್ಯ ವಸ್ತುಗಳು, ಅಸ್ಸಾಂ, ತೆಲಂಗಾಣ, ಆಂಧ್ರಪ್ರದೇಶದ ಸೀರೆಗಳು,  ಕೈ ಮಗ್ಗ ಸೀರೆಗಳು,  ಸಿರಿಧಾನ್ಯ ಉತ್ಪನ್ನಗಳು, ಯುವತಿಯರ ಕಣ್ಣು ಕುಕ್ಕಿಸುವ ಆಕರ್ಷಕ ಕಿವಿಯೋಲೆಗಳು, ಮಣಿ ಸರಗಳು, ಖಾದಿ ಉತ್ಪನ್ನ, ಕೃತಕ ಆಭರಣಗಳು, ಮಡಿಕೆಗಳು ಮಾರಾಟ ಮತ್ತು ಪ್ರದರ್ಶನಕ್ಕಿಡಲಾಗಿದೆ.
ಖಾರ ತಿಂಡಿ ತಿನಿಸುಗಳು, ಕೇರಳ ಮನೆಯಲ್ಲಿ ತಯಾರಿಸಲ್ಪಟ್ಟ ಉಪ್ಪಿನಕಾಯಿ, ಉತ್ತರ ಕರ್ನಾಟಕದ ಚಟ್ನಿ ಪುಡಿ, ಖಾರದ ಪುಡಿ, ಸಾಂಬಾರು ಪದಾರ್ಥ ಮಸಾಲಗಳು, ಗ್ರಾಮೀಣ ಮಹಿಳೆಯರ ಕೈಯಿಂದ ತಯಾರಿಸಲ್ಪಟ್ಟ ವಿಭಿನ್ನ ವಿನ್ಯಾಸವುಳ್ಳ ಬ್ಯಾಗ್‍ಗಳು, ಮನೆಯ ಅಲಂಕಾರವನ್ನು ಹೆಚ್ಚಿಸುವ ವಿಭಿನ್ನ ಶೈಲಿಯ ಬಣ್ಣದ ಹೂದಾನಿಗಳು ಸೇರಿದಂತೆ ವಿವಿಧ ರಾಜ್ಯದ ವಸ್ತುಗಳು  ಸರಸ್ ಮೇಳದಲ್ಲಿ ಕೈಗೆಟುಕುವ ದರದಲ್ಲಿ ಲಭ್ಯವಿದೆ.
ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಕುಟುಂಬದ ಆದಾಯ ಹೆಚ್ಚಿಸಲು, ಬದುಕು ಕಟ್ಟಿಕೊಡಲು, ಉತ್ತಮ ಲಾಭ ಗಳಿಸಲು ಇಂತಹ ಮಾರಾಟ  ಮೇಳಗಳು ಸಹಕಾರಿ. ಈ ಮೇಳದಲ್ಲಿ ಅಧಿಕ ಸಂಖ್ಯೆಯ ಮಳಿಗೆಗಳಿದ್ದು, ಫುಡ್‍ಕೋರ್ಟ್‍ನಲ್ಲಿ 30ಕ್ಕಿಂತ ಅಧಿಕ ಮಳಿಗೆಗಳಿವೆ. ಕರಾವಳಿ ತಿನಿಸುಗಳು, ನೀರುದೋಸೆ,  ಚಿಕನ್ ಸುಕ್ಕ, ಮೀನು ಖಾದ್ಯಗಳು, ಚುರುಮುರಿ, ರಾಗಿಮುದ್ದೆ, ಚಿಕನ್ ಬಿರಿಯಾನಿ, ಜ್ಯೂಸ್ ಹೀಗೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಸರಸ್ ಮೇಳ ಫೆಬ್ರವರಿ 28ರ ವರೆಗೆ ನಡೆಯಲಿದೆ.





error: Content is protected !!
Scroll to Top