ವಿಶೇಷಚೇತನರ ಬಾಳಿಗೆ ಆಸರೆಯಾದ ಇಂದಿರಾ ಕ್ಯಾಂಟೀನ್: ಜಿಬಿಎ ಕಡೆಯಿಂದ ಹೊಸ ಉದ್ಯೋಗ ಯೋಜನೆ!

(ನ್ಯೂಸ್‌ ಕಡಬ) newskadaba.com,ಫೆ.27 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗೆ ಹೊಸ ರೂಪ ನೀಡಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಗ್ರೇಟರ್‌ ಪ್ಲಾನ್‌ ಮಾಡಿದೆ.ಗುಣಮಟ್ಟದ ಆಹಾರ ಮತ್ತು ಸೇವೆಯಲ್ಲಿ ಕೆಲವು ಕಾಲದಿಂದ ಉಂಟಾಗಿದ್ದ ಅಸಮಾಧಾನಕ್ಕೆ ಪರಿಹಾರ ಕಂಡುಹಿಡಿಯಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಇಂದಿರಾ ಕ್ಯಾಂಟೀನ್‌ಗಳಿಗೆ ಕಾಯಕಲ್ಪ ಕಲ್ಪಿಸಲು ಮನಸು ಮಾಡಿದೆ.

ಇಂದಿರಾ ಕ್ಯಾಂಟೀನ್‌ಗಳಲ್ಲಿ ಅಂಧರು, ವಿಶೇಷಚೇತನರು ಸೇರಿದಂತೆ ವಿವಿಧ ವಿಶೇಷ ಚೇತನರಿಗೆ ಉದ್ಯೋಗ ನೀಡುವ ಯೋಜನೆಗೆ ಜಿಬಿಎ ರೂಪುರೇಷೆ ಸಿದ್ಧಪಡಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ ಆಯ್ದ ಸಂಘ ಸಂಸ್ಥೆಗಳ ಮೂಲಕ ಅರ್ಹ ಅಭ್ಯರ್ಥಿಗಳ ಆಯ್ಕೆ ಮಾಡಿ ಜಿಬಿಎ ವತಿಯಿಂದ ವಿಶೇಷ ತರಬೇತಿ ನೀಡಿದ ನಂತರ ಕ್ಯಾಂಟೀನ್‌ಗಳಲ್ಲಿ ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.

ಈ ಮೂಲಕ ಕ್ಯಾಂಟೀನ್‌ಗಳಿಗೆ ಸಾಮಾಜಿಕ ಸ್ಪರ್ಶ ನೀಡುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಕೆಲವು ಖಾಸಗಿ ಹೋಟೆಲ್‌ಗಳು ವಿಶೇಷಚೇತನರಿಗೆ ಉದ್ಯೋಗ ನೀಡಿ ಮಾದರಿಯಾಗಿರುವ ಹಿನ್ನೆಲೆಯಲ್ಲಿ, ಅದೇ ಮಾದರಿಯನ್ನು ಸರ್ಕಾರದ ಯೋಜನೆಯಲ್ಲಿ ಜಾರಿಗೆ ತರಲು ತೀರ್ಮಾನಿಸಲಾಗಿದೆ.ಇತ್ತೀಚೆಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ಗುಣಮಟ್ಟದ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಆಹಾರ ತಯಾರಿಕೆ ಮತ್ತು ಪೂರೈಕೆ ವಿಚಾರದಲ್ಲಿ ಹೊಸ ವ್ಯವಸ್ಥೆ ರೂಪಿಸಲು ಚರ್ಚೆಗಳು ನಡೆಯುತ್ತಿವೆ.ಈ ಸಂಬಂಧ ಇಸ್ಕಾನ್‌ ಸಂಸ್ಥೆಯೊಂದಿಗೆ ಮಾತುಕತೆ ನಡೆದಿದ್ದು, ಸಮರ್ಪಕ ಗುಣಮಟ್ಟದ ಆಹಾರ ಪೂರೈಕೆಗೆ ಸಹಕಾರದ ಬಗ್ಗೆ ಚರ್ಚಿಸಲಾಗಿದೆ.

Scroll to Top