(ನ್ಯೂಸ್ ಕಡಬ) newskadaba.com,ಫೆ.27 ಬೆಂಗಳೂರು: ನಿಗದಿತ ವೇಳಾಪಟ್ಟಿಯಂತೆ ಫೆ.28ರಿಂದ ರಾಜ್ಯಾದ್ಯಂತ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಆರಂಭವಾಗಲಿದ್ದು, ಈ ಬಾರಿ 7,10,363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ಮಾ.17ರವರೆಗೆ ನಡೆಯುವ ಪರೀಕ್ಷೆಗೆ ರಾಜ್ಯಾದ್ಯಂತ 1,217 ಕೇಂದ್ರಗಳನ್ನು ಗುರುತಿಸಲಾಗಿದ್ದು ಯಾವುದೇ ಅಕ್ರಮ, ಗೊಂದಲಗಳಿಗೆ ಅವಕಾಶವಾಗದೆ ಸುಸೂತ್ರವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಹಾಗೂ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.
ಪರೀಕ್ಷೆಗೆ ನೋಂದಾಯಿಸಿರುವ 7.10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿ
ಪರೀಕ್ಷೆಗೆ ನೋಂದಾಯಿಸಿರುವ 7.10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ 6,46,801 ತರಗತಿ ವಿದ್ಯಾರ್ಥಿಗಳು (ಫ್ರೆಷರ್ಸ್), 50,540 ಪುನರಾವರ್ತಿತ, 13,022 ಖಾಸಗಿ ಅಭ್ಯರ್ಥಿಗಳಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು 2,92,645 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 2,11,174, ಕಲಾ ವಿಭಾಗದಲ್ಲಿ 1,42,982 ಮಂದಿ ನೋಂದಾಯಿಸಿದ್ದಾರೆ ಎಂದು ಮಂಡಳಿ ತಿಳಿಸಿದೆ.








