ಕಟ್ಟಡ ನಿರ್ಮಾಣಕ್ಕೆಂದು ತೋಡಿದ ಪಾಯದ ಗುಂಡಿಯಲ್ಲಿ ನೀರು ಸಂಗ್ರಹ ► ನೀರಿನ ಹೊಂಡಕ್ಕೆ ಬಿದ್ದು ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಉಡುಪಿ, ಮೇ.11. ಕಟ್ಟಡ ನಿರ್ಮಾಣಕ್ಕೆಂದು ತೆಗೆದಿಟ್ಟ ಪಾಯದಲ್ಲಿ ಮಳೆ ನೀರು ತುಂಬಿದ್ದು, ನಿಂತ ನೀರಲ್ಲಿ ಆಡಲೆಂದು ಇಳಿದ ಇಬ್ಬರು ಮಕ್ಕಳ ಪೈಕಿ ಒಂದು ಮಗು ಮೃತಪಟ್ಟ ಘಟನೆ ಗುರುವಾರ ಸಂಜೆ ಮಲ್ಪೆಯಲ್ಲಿ ನಡೆದಿದೆ.

ಮೃತ ಮಗುವನ್ನು ಮಲ್ಪೆಯ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪದ ನಿವಾಸಿ ಮಾಲಿನಿ ಎಂಬವರ ಮೂರುವರೆ ವರ್ಷ ಪ್ರಾಯದ ಪುತ್ರ ರಾಘವೇಂದ್ರ ಎಂದು ಗುರುತಿಸಲಾಗಿದೆ. ಅವರ ಸಹೋದರಿ ಪ್ರಫುಲ್ಲ ಎಂಬವರ ನಾಲ್ಕು ವರ್ಷ ಪ್ರಾಯದ ಪ್ರವೀಣ್ ನನ್ನು ಬದುಕಿಸಲಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದೆ. ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕಾಗಿ ತೋಡಿದ ಅಡಿಪಾಯ ಗುಂಡಿಯಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ನೀರು ನಿಂತಿತ್ತೆನ್ನಲಾಗಿದೆ.

Also Read  ಸುಳ್ಯ: ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ ಬೈಕ್ ಢಿಕ್ಕಿ ➤‌ ಏಳು ವರ್ಷದ ಬಾಲಕಿ ಮೃತ್ಯು

ಪ್ರತೀದಿನ ಸಂಜೆ ಸ್ಥಳೀಯ ಯುವಕರು ಕಬಡ್ಡಿ ಆಡಲು ಕಾಲೇಜು ಮೈದಾನಕ್ಕೆ ಆಗಮಿಸುತ್ತಿದ್ದು, ಗುರುವಾರ ಬಂದಿಲ್ಲವೆನ್ನಲಾಗಿದೆ. ಆದರೆ ಸ್ಥಳೀಯ ಮಕ್ಕಳು ಆಟ ನೋಡಲೆಂದು ಬರುತ್ತಿದ್ದು, ಎಂದಿನಂತೆ ಬಂದ ಪುಟಾಣಿಗಳು ಪಾಯದ ಗುಂಡಿಯಲ್ಲಿದ್ದ ನೀರಿನಲ್ಲಿ ಆಟವಾಡುತ್ತಿದ್ದಾಗ ಮುಳುಗಿದ್ದಾರೆ‌. ತಕ್ಷಣವೇ ಕಾಲೇಜಿನ ವಾಚ್‌ ಮ್ಯಾನ್ ತಕ್ಷಣವೇ ಇಬ್ಬರನ್ನು ನೀರಿನಿಂದ ಮೇಲಕ್ಕೆತ್ತಿದ್ದು, ಅಷ್ಟರಲ್ಲಿ ರಾಘವೇಂದ್ರ ಮೃತಪಟ್ಟಿದ್ದರೆನ್ನಲಾಗಿದೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!
Scroll to Top