ಕಡಬ: ಮನೆಯ ಮೇಲೆ ಬಿದ್ದ ಮರ ► ಮಹಿಳೆಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಮೇ.09. ಮಂಗಳವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಬೃಹತ್ ಮರವೊಂದು ವಿದ್ಯುತ್ ತಂತಿ ಹಾಗೂ ಮನೆಯೊಂದರ ಮೇಲೆ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿ ಮಹಿಳೆಯೋರ್ವರು ಗಾಯಗೊಂಡ ಘಟನೆ ಕಳಾರ ಎಂಬಲ್ಲಿ ಬುಧವಾರದಂದು ನಡೆದಿದೆ.

ಗಾಯಗೊಂಡ ಮಹಿಳೆಯನ್ನು ಕಡಬ ಗ್ರಾಮದ ಕಳಾರ ನಿವಾಸಿ ಮಹಮ್ಮದ್ ಎಂಬವರ ಪುತ್ರಿ ಹಾಜಿರಾ ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಳಾರ ಎಂಬಲ್ಲಿ ರಸ್ತೆ ಬದಿಯಲ್ಲಿದ್ದ ಮರವು ವಿದ್ಯುತ್ ತಂತಿಗೆ ಬಿದ್ದು ಮನೆಗೆ ಬಿದ್ದಿದೆ. ಘಟನೆಯಲ್ಲಿ ಮಹಿಳೆ ಗಾಯಗೊಂಡಿದ್ದು, ಮನೆಗೆ ಹಾನಿಯಾಗಿದೆ. ಅಲ್ಲದೆ ಮೂರು ವಿದ್ಯುತ್ ಕಂಬಗಳೂ ನೆಲಕ್ಕುರುಳಿವೆ. ಇಸ್ಮಾಯಿಲ್ ಎಂಬವರ ಅಂಗಡಿಗೂ ಸಣ್ಣ ಮಟ್ಟಿನ ಹಾನಿಯಾಗಿದೆ ಎನ್ನಲಾಗಿದೆ.

Scroll to Top