(ನ್ಯೂಸ್ ಕಡಬ) newskadaba.com,ಫೆ.05 ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿಜೆ ರಾಯ್ ಅವರು ತಮ್ಮ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡರಚಿಸಿದೆ. ಆದರೆ, ಈ ಪ್ರಕರಣದಲ್ಲಿ ಆದಾಯ ತೆರಿಗೆ ಅಧಿಕಾರಿಗಳ ಪಾತ್ರದ ಕುರಿತು ತನಿಖೆಯ ವ್ಯಾಪ್ತಿ ಕುರಿತು ಚರ್ಚೆಗಳು ಶುರುವಾಗಿವೆ.
ಸಿಜೆ ರಾಯ್ ಕುಟುಂಬವು, “ಐಟಿ ಅಧಿಕಾರಿಗಳ ಕಿರುಕುಳವೇ ಆತ್ಮಹತ್ಯೆಗೆ ಕಾರಣ” ಎಂದು ಗಂಭೀರ ಆರೋಪ ಮಾಡಿದ್ದು, ತೆರಿಗೆ ತಪ್ಪಿಸುವಿಕೆ ಸಂಬಂಧಿತ ಎಲ್ಲಾ ಕಡತಗಳು ಮತ್ತು ದಾಖಲೆಗಳು ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯ ವಶದಲ್ಲಿರುವುದರಿಂದ ಎಸ್‌ಐಟಿ ಸತ್ಯವನ್ನು ಬಯಲು ಮಾಡಲು ಸಾಧ್ಯವೇ ಎಂಬ ಪ್ರಶ್ನೆಗಳು ಶುರುವಾಗಿವೆ.
ಎಸ್‌ಐಟಿಗೆ ಐಟಿ ಅಧಿಕಾರಿಗಳನ್ನು ಪ್ರಶ್ನಿಸಿ ಅವರ ಹೇಳಿಕೆಗಳನ್ನು ದಾಖಲಿಸುವ ಅಧಿಕಾರ ಮಾತ್ರ ಇದೆ. ಆದರೆ, ತೆರಿಗೆ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಹಂಚಿಕೊಳ್ಳುವುದು ಐಟಿ ಅಧಿಕಾರಿಗಳ ಸ್ವೈಚ್ಛೆಗೆ ಒಳಪಟ್ಟಿದೆ ಎಂದು ಕಾನೂನು ತಜ್ಞರು ಮತ್ತು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಐಟಿ ಅಧಿಕಾರಿಗಳು ಸಿಜೆ ರಾಯ್ ಅವರನ್ನು ವಿಚಾರಣೆ ಮಾಡುತ್ತಿರಲಿಲ್ಲ. ಹಲವು ತಿಂಗಳ ಮಾಹಿತಿ ಸಂಗ್ರಹದ ಬಳಿಕ ಕೆಲವು ವಿಚಾರಗಳ ಬಗ್ಗೆ ಸ್ಪಷ್ಟತೆ ಪಡೆಯಲು ಮಾತುಕತೆ ನಡೆಸುತ್ತಿದ್ದರು. ಇದನ್ನು ವಿಚಾರಣೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.












