ಕೇಂದ್ರ ಸರ್ಕಾರದ ವಕೀಲರ ನಕಲಿ ಮಾಡಿದವನಿಗೆ ಜೈಲು ಶಿಕ್ಷೆ: ಹೈಕೋರ್ಟ್ ಆದೇಶ

(ನ್ಯೂಸ್‌ ಕಡಬ) newskadaba.com,  ಡಿ.15:  ವ್ಯಾಜ್ಯವೊಂದರ ಸಂಬಂಧ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ವಕೀಲರ ಸಹಿ ಫೋರ್ಜರಿ ಮಾಡಿ ಆಕ್ಷೇಪಣೆ ಪ್ರತಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವ್ಯಕ್ತಿಗೆ ನ್ಯಾಯಾಂಗ ನಿಂದನೆ ಆಪರಾಧದಡಿ ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್‌ ಆದೇಶಿಸಿದೆ. ಕೋರಮಂಗಲದ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಆಸ್ಟ್ರೋಫಿಸಿಕ್ಸ್‌ ಸಂಸ್ಥೆಯ (ಐಐಎ) 2ನೇ ಬ್ಲಾಕ್‌ ನಿವಾಸಿ ಕೆ.ಧನಂಜಯ (48) ಶಿಕ್ಷೆಗೆ ಗುರಿಯಾದ ಅಪರಾಧಿ.

ಪ್ರಕರಣ ಸಂಬಂಧ ಹೈಕೊರ್ಟ್‌ ರಿಜಿಸ್ಟ್ರಾರ್‌ ಜನರಲ್‌ ದಾಖಲಿಸಿದ್ದ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಅನು ಶಿವರಾಮನ್‌ ಮತ್ತು ನ್ಯಾಯಮೂರ್ತಿ ವಿಜಯ ಕುಮಾರ ಎ.ಪಾಟೀಲ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಕೇಂದ್ರ ಸರ್ಕಾರದ ಪರ ಹಾಜರಾಗುತ್ತಿದ್ದ ವಕೀಲ ಎಲ್‌.ಹರೀಶ್‌ ಕುಮಾರ್‌ ಅವರ ಸಹಿಯನ್ನು ಧನಂಜಯ ಫೋರ್ಜರಿ ಮಾಡಿದ್ದಾರೆ. ಅವರ ಹೆಸರಿನಲ್ಲಿ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ಕೃತ್ಯ ನ್ಯಾಯಾಂಗ ನಿಂದನೆ ಅಪರಾಧವಾಗಿದ್ದು, ದೋಷಿಗೆ ನಾಲ್ಕು ತಿಂಗಳ ಸಾಧಾರಣ ಜೈಲು ಶಿಕ್ಷೆ ಮತ್ತು 2 ಸಾವಿರ ರು. ದಂಡ ವಿಧಿಸಲಾಗುತ್ತಿದೆ ಎಂದು ಆದೇಶಿಸಿತು. ಇದರಿಂದ ಧನಂಜಯ ಜೈಲು ಪಾಲಾಗಿದ್ದಾರೆ.

Scroll to Top