(ನ್ಯೂಸ್ ಕಡಬ) newskadaba.com, ನ.27 ಕಲಬುರಗಿ: ಕಳೆದ ತಿಂಗಳು 10 ರೂ. ಕೆ.ಜಿ ಇದ್ದ ಜವಾರಿ ಟೊಮೆಟೊ ಬೆಲೆ ದಿಢೀರ್ ಏರಿಕೆಯಾಗಿದ್ದು, ಕೆ.ಜಿ.ಗೆ 70-80 ರೂ. ಮಾರಾಟವಾಗುತ್ತಿದೆ. ಇದು ಶೀಘ್ರವೇ ಶತಕ ಮುಟ್ಟಲಿದೆ ಎಂಬ ಮಾತು ತರಕಾರಿ ಮಾರಾಟಗಾರರಿಂದ ಕೇಳಿ ಬರುತ್ತಿದೆ..
ಕಳೆದ ಎರಡು ತಿಂಗಳ ಹಿಂದೆ ಟೊಮೆಟೊ ಬೆಲೆ ಕುಸಿತ ಉಂಟಾಗಿ ರಸ್ತೆಗೆ ಹಾಕಿದ್ದ ಬೆಳೆಗಾರರಿಗೆ ಎರಡು ತಿಂಗಳ ಅಂತರದಲ್ಲಿ ಲಾಭ ಹುಡುಕಿಕೊಂಡು ಬರುತ್ತಿದೆ. ಮನೆಯಲ್ಲಿನ ಅಡುಗೆಯಲ್ಲಿ ಟೊಮೆಟೊ ತನ್ನದೆಯಾದ ಸ್ಥಾನ ಪಡೆದು, ಮುಖ್ಯ ಸಾಮಗ್ರಿಯಾಗಿದೆ. ದಿಢೀರ್ ದರ ಏರಿಕೆಯಿಂದ ಕೆ.ಜಿ. ತೆಗೆದುಕೊಂಡು ಹೋಗುವವರು ಅರ್ಧ ಕೆ.ಜಿ.ಗೆ ಇಳಿಕೆ ಕಂಡಿದ್ದಾರೆ.
ಕಳೆದ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿಸುರಿದ ಭಾರಿ ಮಳೆಯಿಂದ ಟೊಮೆಟೊ ಬೆಳೆ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದೆ. ರಾಜ್ಯದ ಟೊಮೆಟೊ ತವರು ಎಂದು ಕರೆಯುವ ಕೋಲಾರದಲ್ಲಿಯೂ ಕೂಡ ಟೊಮೆಟೊ ಆವಕ ಬಹಳಷ್ಟು ಪ್ರಮಾಣದಲ್ಲಿ ಕುಸಿದಿದೆ. ಇದು ಸಹ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.












