(ನ್ಯೂಸ್ ಕಡಬ) newskadaba.com, ನ.27 ವಿಜಯಪುರ: ಯುಪಿಎಸ್‌ಇ ಪರೀಕ್ಷೆ ತರಬೇತಿ ಪಡೆಯಲು ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ ಮಧ್ಯೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಉತ್ತರ ಕರ್ನಾಟಕದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಮತ್ತು ಬದ್ಧವಾಗಿರುವ ಬಿ..ಎಲ್.ಡಿ.ಇ ಸಂಸ್ಥೆ ಮತ್ತು ರಾಜ್ಯದಲ್ಲಿ ನಾಗರಿಕ ಸೇವಾ ತರಬೇತಿ ನೀಡುವಲ್ಲಿ ಹೆಸರಾಗಿರುವ ಸಾಧನಾ ಕೊಂಚಿAಗ್ ಸೆಂಟರ್ ಈ ಭಾಗದ ಯುವಕರ ಕನಸು ನನಸು ಮಾಡಲು ಮಹತ್ವದ ಒಪ್ಪಂದಕ್ಕೆ ಇಂದು ಸಹಿ ಹಾಕಿವೆ. ಬಿ.ಎಲ್.ಡಿ.ಇ ಸಂಸ್ಥೆಯ ಪರವಾಗಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹಾಗೂ ಸಾಧನಾ ಕೋಚಿಂಗ್ ಸೆಂಟರ್ ಪರವಾಗಿ ನಿರ್ದೇಶಕಿ ಜ್ಯೋತಿ ಒಡಂಬಡಿಕೆಗೆ ಸಹಿ ಹಾಕಿದರು.
ಕಲೆ, ವಿಜ್ಞಾನ, ವಾಣಿಜ್ಯ, ವೃತ್ತಿ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣದ ಜೊತೆಗೆ ಈಗ ಸಂಸ್ಥೆ ಲೋಕಸೇವೆ ಆಯೋಗದ ಪರೀಕ್ಷೆಗಳಿಗೆ ಈ ಭಾಗದ ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸಲು ಈ ಒಡಂಬಡಿಕೆ ಮಾಡಿಕೊಂಡಿದ್ದು, ಐಎಎಸ್, ಐಪಿಎಸ್ ಸೇರಿದಂತೆ ನಾನಾ ಸರಕಾರಿ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಲು ಬಯಸುವ ಯುವಕರಿಗೆ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ ನಿರ್ದೇಶಕಿ ಡಾ. ಜ್ಯೋತಿ ಮಾತನಾಡಿ, ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕ್ಷೇತ್ರದಲ್ಲಿ ತಮ್ಮ ಕೇಂದ್ರ ೧೪ ವರ್ಷಗಳನ್ನು ಪೂರೈಸಿದೆ. ಮೂಡಬಿದಿರೆಯ ಆಳ್ವಾಸ್ ಕಾಲೇಜು ಸಂಯೋಜಿತ ತರಬೇತಿ ಕಾರ್ಯಕ್ರಮಗಳನ್ನು ನಡೆಸಿ ಅನೇಕ ವಿದ್ಯಾರ್ಥಿಗಳಿಗೆ ವೃತ್ತಿ ರೂಪಿಸಿಕೊಳ್ಳಲು ನೆರವಾಗಿದೆ. ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ಉಪಸ್ಥಿತರಿದ್ದರು.












