(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.3. ಇನ್ನು ಮುಂದೆ ನಿಮ್ಮ ಮೊಬೈಲ್ ನಲ್ಲಿ ನೆಟ್‍ವರ್ಕ್ ಸಿಗ್ನಲ್ ಇಲ್ಲದೇ ಇರುವುದರಿಂದ ಕಾಲ್ ಮಾಡಲು ಸಾಧ್ಯವಿಲ್ಲ ಎಂದು ನೀವು ಯೋಚನೆ ಮಾಡಬೇಕಾಗಿಲ್ಲ. ನೆಟ್‍ವರ್ಕ್ ಇಲ್ಲದೇ ಇರುವ ಜಾಗದಿಂದ ನೀವು ಇತರ ಯಾವುದೇ ಮೊಬೈಲ್‍ಗೆ ಅಥವಾ ಲ್ಯಾಂಡ್‍ಲೈನ್ ಗೆ ಕರೆ ಮಾಡಬಹುದು.
ಇದು ಹೇಗೆ ಸಾಧ್ಯ ಎಂದು ನೀವು ಯೋಚನೆ ಮಾಡುತ್ತಿದ್ದರೆ ಇಲ್ಲಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ. ಇಂಟರ್ ನೆಟ್ ಟೆಲಿಫೋನಿ ಎಂಬ ಆ್ಯಪ್ ಬಳಸಿ ನೀವು ನೆಟ್‍ವರ್ಕ್ ಸಿಗ್ನಲ್ ಇಲ್ಲದಿರುವ ಪ್ರದೇಶದಿಂದ ನಿಮ್ಮ ಮೊಬೈಲ್ ನಿಂದ ಯಾವುದೇ ಲ್ಯಾಂಡ್‍ಲೈನ್, ಮೊಬೈಲ್‍ಗೆ ಕರೆ ಮಾಡಬಹುದಾಗಿದೆ. ಈ ಹೊಸ ಯೋಜನೆಯನ್ನು ಭಾರತದಲ್ಲಿ ಪರಿಚಯಿಸುವಂತೆ ಭಾರತೀಯ ದೂರಸಂಪರ್ಕ ಪ್ರಾಧಿಕಾರವು ಕಳೆದ ವರ್ಷ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ಅಂತೂ ಕೊನೆಗೂ ಗ್ರೀನ್ ಸಿಗ್ನಲ್ ದೊರೆತಿದೆ. ಈ ಹೊಸ ತಂತ್ರಜ್ಞಾನವು ಮನೆ, ಕಚೇರಿಯ ಅಥವಾ ಯಾವುದೇ ಇತರ ವೈಫೈ ಬ್ರಾಡ್ ಬ್ಯಾಂಡ್ ನೆಟ್‍ವರ್ಕ್‍ಗೆ ಕನೆಕ್ಟ್ ಆಗಿ ಕರೆಗಳನ್ನು ಮಾಡುವಂತಹಾ ಹೊಸ ಆವಿಷ್ಕಾರವಾಗಿದೆ.
ಹೆಚ್ಚಿನ ವಿವರ:
ಬಿಎಸ್‍ಎನ್‍ಎಲ್, ಏರ್‍ಟೆಲ್, ರಿಲಯನ್ಸ್ ಜಿಯೋ ಹಾಗು ಇನ್ನಿತರ ಟೆಲಿಕಾಂ ಆಪರೇಟರ್ ಗಳು ಈ ಹೊಸ ಇಂಟರ್ ನೆಟ್ ಟೆಲಿಫೋನಿ ಸೇವೆಯನ್ನು ತನ್ನ ಗ್ರಾಹಕರಿಗೆ ಒದಗಿಸಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಟೆಲಿಫೋನಿ ಪರವಾನಗಿ ಪಡೆದಿರುವ ಟೆಲಿಕಾಂ ಕಂಪನಿ ಅಥವಾ ಖಾಸಗಿ ಕಂಪನಿಗಳು ಗ್ರಾಹಕರಿಗೆ ಹೊಸ ನಂಬರ್ ನೀಡುತ್ತದೆ. ಇದಕ್ಕೆ ಹೊಸ ಸಿಮ್ ನ ಅವಶ್ಯಕತೆ ಇರುವುದಿಲ್ಲ. ಗ್ರಾಹಕರು ಇಂಟರ್ ನೆಟ್ ಟೆಲಿಫೋನಿ ಆ್ಯಪ್ ಡೌನ್ಲೋಡ್ ಮಾಡುವ ಮೂಲಕ ತಮ್ಮ ಹೊಸ ನಂಬರ್ ಅನ್ನು ಸಕ್ರೀಯಗೊಳಿಸಬಹುದು. ಗ್ರಾಹಕರು ತಾವು ಬಳಸುತ್ತಿರುವ ಸಿಮ್ ಕಂಪನಿಯ ಟೆಲಿಫೋನಿ ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡರೆ ಹೊಸ ನಂಬರ್ ನ ಅವಶ್ಯಕತೆ ಇರುವುದಿಲ್ಲ. ಒಂದು ವೇಳೆ ನೀವು ಬಳಸುತ್ತಿರುವ ಸಿಮ್ ಕಂಪನಿಯ ಟೆಲಿಫೋನಿ ಆಪ್ ಅನ್ನು ಬಿಟ್ಟು ಬೇರೆ ಸಿಮ್ ಕಂಪನಿಯ ಟೆಲಿಫೋನಿ ಆಪ್ ಡೌನ್ ಲೋಡ್ ಮಾಡಿಕೊಂಡರೆ ಆಗ ನಿಮಗೆ ಹೊಸ ನಂಬರ್ ದೊರೆಯಲಿದೆ.
ಈ ಹೊಸ ಆ್ಯಪ್ ನಿಂದಾಗಿ ಕಾಲ್ ಡ್ರಾಪ್ ನಂತಹ ಸಮಸ್ಯೆಗಳು ದೂರವಾಗಲಿದೆ. ಡೇಟಾ ಬಳಸಿ ಕರೆಗಳು ಮಾಡುವುದರಿಂದ ಡೇಟಾಗೆ ಮಾತ್ರ ಶುಲ್ಕ ವಿಧಿಲಾಗುತ್ತದೆ, ಈ ಮೂಲಕ ಕಡಿಮೆ ದರದಲ್ಲಿ ಕರೆ ಮಾಡಬಹುದಾಗಿದೆ.