ಬಿಹಾರದಲ್ಲಿ ಮತ್ತೆ ಅಧಿಕಾರ ಏರಿದ ಎನ್ ಡಿ ಎ

(ನ್ಯೂಸ್‌ ಕಡಬ) newskadaba.com,  ನ.14:   ರಾಷ್ಟ್ರ ರಾಜಕಾರಣಕ್ಕೆ ಹೊಸ ದಿಕ್ಸೂಚಿ ಎಂದೇ ಹೇಳಲಾಗಿದ್ದ ಪ್ರತಿಷ್ಠಿತ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯನ್ನು ಹಿಂದಿಕ್ಕಿ ಎನ್‌ಡಿಎ ಅಭೂತಪೂರ್ವ ಜನಾದೇಶ ಪಡೆದು ಮತ್ತೆ ಅಧಿಕಾರಕ್ಕೆ ಬಂದಿದೆ. ರಾಜ್ಯದ ಒಟ್ಟು 243 ವಿಧಾನಸಭಾ ಕ್ಷೇತ್ರಗಳ ಪೈಕಿ ಎನ್‌ಡಿಎ ಮೈತ್ರಿಕೂಟ 190 ಸ್ಥಾನಗಳನ್ನು ಪಡೆದು ಈ ಬಾರಿ ಭಾರೀ ಜನಾದೇಶದೊಂದಿಗೆ ಅಧಿಕಾರ ಗದ್ದುಗೆ ಹಿಡಿದಿದೆ.

ಎನ್‌ಡಿಎ ಅಬ್ಬರಕ್ಕೆ ಪ್ರತಿಪಕ್ಷಗಳು ಧೂಳಿಪಟವಾಗಿದ್ದು, ಅಧಿಕೃತ ವಿರೋಧ ಪಕ್ಷದ ಸ್ಥಾನಕ್ಕೆ ಬೇಕಾದ ಸ್ಥಾನಗಳನ್ನು ಪಡೆಯಲೂ ವಿಫಲವಾಗಿವೆ. ಈ ಹಿಂದೆ 1999ರಲ್ಲಿ ಎನ್‌ಡಿಎ ಮೈತ್ರಿಕೂಟ ದ್ವಿಶತಕ ಬಾರಿಸಿ ದಾಖಲೆ ಬರೆದಿತ್ತು. ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಮತ್ತೆ ಅಷ್ಟೇ ಸ್ಥಾನಗಳನ್ನು ಪಡೆಯುವತ್ತ ದಾಪುಗಾಲಿಟ್ಟಿದೆ.

ಪ್ರತಿಪಕ್ಷಗಳ ಮೈತ್ರಿಕೂಟ ಮಹಾಘಟಬಂಧನ್‌ ಕೇವಲ 50 ಸ್ಥಾನಗಳನ್ನು ಪಡೆಯಲು ಶಕ್ತವಾಗಿದ್ದು, ಅಧಿಕಾರ ಹಿಡಿಯುವ ಕನಸು ನುಚ್ಚು ನೂರಾಗಿದೆ. ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಹಾಗೂ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌, ಮತ್ತೋರ್ವ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಎರಡೂ ಕ್ಷೇತ್ರಗಳಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ.

ಈ ಚುನಾವಣೆಯ ವಿಶೇಷವೆಂದರೆ ಆರ್‌ಜೆಡಿಗೆ ಈವರೆಗೂ ಬೆನ್ನೆಲುಬಾಗಿ ನಿಂತಿದ್ದ ಯಾದವರು ಈ ಬಾರಿ ಬಿಜೆಪಿ ಮತ್ತು ಜೆಡಿಯು ಬೆಂಬಲಿಸಿರುವುದು ಫಲಿತಾಂಶದಿಂದಲೇ ಸ್ಪಷ್ಟವಾಗಿದೆ.
ರಾಜ್ಯದ ಪಾಟ್ನಾ, ಮಗಧ್‌, ಸರಳ್‌, ತಿರಹಟ್‌, ದರ್ಬಾಂಗ, ಕೋಶಿ, ಪುರ್ನಿಯಾ, ಬಾಗಲ್ಪುರ, ಮುಂಗಾರ್‌ ಮತ್ತು ಸೀಮಾಂಚಲ ಸೇರಿದಂತೆ ಎಲ್ಲ ಪ್ರದೇಶಗಳಲ್ಲೂ ಎನ್‌ಡಿಎ ಇಂಡಿಯಾ ಮೈತ್ರಿಕೂಟವನ್ನು ಹಿಂದಿಕ್ಕಿ ಗೆಲುವು ಸಾಧಿಸಿದೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮಿದ್ದು, ಸ್ಪರ್ಧಿಸಿದ್ದ 101 ಕ್ಷೇತ್ರಗಳ ಪೈಕಿ 85 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಮೈತ್ರಿ ಪಕ್ಷವಾದ ಜೆಡಿಯು 75 ಕ್ಷೇತ್ರಗಳಲ್ಲಿ ಗೆದ್ದಿದೆ. ಕಳೆದ ಬಾರಿ ಕೇವಲ 45 ಸ್ಥಾನಗಳನ್ನು ನಿತೀಶ್‌ಕುಮಾರ್‌ ಪಕ್ಷ ಗೆದ್ದಿತ್ತು. ಇನ್ನು ಎನ್‌ಡಿಎ ಮೈತ್ರಿಕೂಟದ ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿ ಕೂಡ ಅಚ್ಚರಿ ಎಂಬಂತೆ ನಿರೀಕ್ಷೆ ಮೀರಿ ಗೆಲುವು ಸಾಧಿಸಿದೆ. ಸ್ಪರ್ಧಿಸಿದ್ದ 29 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳನ್ನು ಎಚ್‌ಎಎಂ 2 ಮತ್ತಿತರರು ಒಂದು ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.

Scroll to Top