(ನ್ಯೂಸ್ ಕಡಬ) newskadaba.com, ನ.08 ಮಂಗಳೂರು: ಮಂಗಳೂರು ಹಾಗೂ ಬೆಂಗಳೂರು ನಡುವಿನ ಹೈಸ್ಪೀಡ್ ಕಾರಿಡಾರ್ ಸಂಬಂಧ ಶಿರಾಡಿ ಘಾಟಿಯಲ್ಲಿ ಸುರಂಗ ಮಾರ್ಗ ಸೇರಿದಂತೆ ರೈಲ್ವೇ ಮತ್ತು ಹೆದ್ದಾರಿಗಳ ಸಮಗ್ರ ಅಭಿವೃದ್ಧಿಗೆ ಜಂಟಿ ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರವು ಇದೀಗ ತಜ್ಞರ ಜಂಟಿ ಕಾರ್ಯಕಾರಿ ಸಮಿತಿಯನ್ನು ರಚಿಸಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತಿಳಿಸಿದ್ದಾರೆ.
ಬೆಂಗಳೂರು-ಮಂಗಳೂರು ಹೈಸ್ಪೀಡ್ ಕಾರಿಡಾರ್ ಯೋಜನೆಯಡಿ ಶಿರಾಡಿ ಘಾಟಿಯಲ್ಲಿ ಹೆದ್ದಾರಿ ಹಾಗೂ ರೈಲ್ವೆ ಮಾರ್ಗ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವುದಕ್ಕೆ ಸಂಬಂಧಿಸಿದಂತೆ ಎರಡೂ ಇಲಾಖೆಗಳ ಸಹಭಾಗಿತ್ವದಲ್ಲಿ ಜಂಟಿ ಸಮೀಕ್ಷೆ ನಡೆಸಲು ತಜ್ಞರ ಸಮಿತಿ ರಚಿಸುವಂತೆ ಕ್ಯಾ. ಚೌಟ ಅವರು ಕೇಂದ್ರ ಹೆದ್ದಾರಿ ಸಚಿವಾಲಯಕ್ಕೆ ಮನವಿ ಮಾಡಿದ್ದರು. ಕ್ಯಾ. ಚೌಟ ಅವರ ಕೋರಿಕೆಗೆ ಸ್ಪಂದಿಸಿ ಹೆದ್ದಾರಿ ಸಚಿವಾಲಯವು ತಜ್ಞರ ಜಂಟಿ ಕಾರ್ಯಕಾರಿ ಸಮಿತಿ ರಚನೆ ಮಾಡಿದೆ.
“ರೈಲ್ವೆ ಇಲಾಖೆಯೊಂದಿಗೆ ಶಿರಾಡಿ ಘಾಟ್ ಪ್ರದೇಶದ ಜಂಟಿ ಸಮೀಕ್ಷೆ ನಡೆಸಲು ತಜ್ಞರ ಸಮಿತಿ ನೇಮಿಸುವ ಕುರಿತು ತಾವು ಮಾಡಿದ ವಿಚಾರವನ್ನು ಪರಿಶೀಲಿಸಲಾಗಿದ್ದು, ಹೆದ್ದಾರಿ ಸಚಿವಾಲಯ, ರೈಲ್ವೆ ಸಚಿವಾಲಯ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಒಳಗೊಂಡ ಜಂಟಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ
.ಸಮಗ್ರ ಕರಾವಳಿ ಹಾಗೂ ಮಂಗಳೂರು ಬಂದರು ಅಭಿವೃದ್ದಿ ದೃಷ್ಟಿಯಿಂದ ಮಂಗಳೂರು -ಬೆಂಗಳೂರು ನಡುವೆ ರೈಲ್ವೇ ಹಾಗೂ ಹೆದ್ದಾರಿ ಅಭಿವೃದ್ದಿ ಆಗಬೇಕಾಗಿದೆ. ಸಂಸದರ ಕೋರಿಕೆಗೆ ಸ್ಪಂದಿಸಿದ ಸಚಿವ ನಿತಿನಿ ಗಡ್ಕರಿ ಅವರು ಜಂಟಿ ಕಾರ್ಯಕಾರಿ ಸಮಿತಿ ರಚಿಸಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.








