(ನ್ಯೂಸ್ ಕಡಬ) newskadaba.com, ಅ..29: ಉಡುಪಿ: ಕನಕದಾಸರಿಗೆ ಶ್ರೀಕೃಷ್ಣನೊಲಿದ ದಿವ್ಯ ತಾಣ, ಕರ್ನಾಟಕ ಕರಾವಳಿಯ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 28ರಂದು ಆಗಮಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಶ್ರೀಕೃಷ್ಣ ಮಠ ಪ್ರವೇಶಿಸಿ, ಪೊಡವಿಯೊಡೆಯ ಶ್ರೀಕೃಷ್ಣನ ದರ್ಶನ ಮಾಡಿ ಆಶೀರ್ವಾದ ಪಡೆಯಲಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಿ ಸ್ವಾಗತಕ್ಕೆ ಈಗಾಗಲೇ ಭರದ ಸಿದ್ಧತೆ ನಡೆಸುತ್ತಿದ್ದು, ಶಿಸ್ತು ಬದ್ದ ಭದ್ರತೆಯ ತಯಾರಿಯನ್ನುಈಗಾಗಲೇ ಪೊಲೀಸ್ ವ್ಯವಸ್ಥೆ ನಡೆಸುತ್ತಿದೆ ಎನ್ನುವ ವಿಷಯ ತಿಳಿದು ಬಂದಿದೆ.
ಮೋದಿ ಅವರ ಈ ಭೇಟಿ ಉಡುಪಿಯಲ್ಲಿ ಭಾರೀ ಉತ್ಸಾಹ ಮತ್ತು ಸಿದ್ಧತೆಯ ವಾತಾವರಣವನ್ನು ನಿರ್ಮಿಸಿದೆ. ಉಡುಪಿ ಶ್ರೀಕೃಷ್ಣ ಮಠದ ಪೇಜಾವರ, ಪುತ್ತಿಗೆ, ಪಲಿಮಾರು ಸೇರಿ ಎಲ್ಲಾ ಅಷ್ಟಮಠಗಳ ಯತಿಗಳು ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಮತ್ತು ಸ್ವಾಗತ ಸಿದ್ಧತೆಯನ್ನು ನಡೆಸಿಕೊಂಡಿದ್ದರ ಕುರಿತು ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಬೃಹತ್ ಗೀತೋತ್ಸವ
ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಮಠದಲ್ಲಿ ಶ್ರೀಕೃಷ್ಣ ದೇವರ ದರ್ಶನದ ನಂತರ ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವ ‘ಲಕ್ಷ ಕಂಠ ಗೀತಾ ಪಾರಾಯಣ – ಬೃಹತ್ ಗೀತೋತ್ಸವʼ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಅಪೂರ್ವ ಧಾರ್ಮಿಕ ಉತ್ಸವದಲ್ಲಿ ಸಾವಿರಾರು ಭಕ್ತರು ಒಂದೇ ಸಮಯದಲ್ಲಿ ಶ್ರೀಮದ್ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸುವ ಮೂಲಕ ಆತ್ಮಶುದ್ಧಿ ಮತ್ತು ವಿಶ್ವಶಾಂತಿಯ ಸಂದೇಶ ನೀಡಲಿದ್ದಾರೆಂದು ಉಡುಪಿ ಕೃಷ್ಣನ ಭಕ್ತ ಮಂಡಳಿ ಪತ್ರಿಕಾಗೋಷ್ಠಿಗಳಲ್ಲಿ ಮಾಹಿತಿ ನೀಡಿದ್ದಾರೆ.








