(ನ್ಯೂಸ್ ಕಡಬ) newskadaba.com ಕಡಬ, ಎ.26. ಇಚ್ಲಂಪಾಡಿ ಗ್ರಾಮದ ಯುವಕನೋರ್ವ ಸಮೀಪದ ಪರಿಶಿಷ್ಟ ವರ್ಗಕ್ಕೆ ಸೇರಿದ ಯುವತಿಯೊಂದಿಗೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ವೇಳೆ ಸ್ಥಳೀಯರಿಗೆ ಮಾಹಿತಿ ದೊರೆತು ಅವರು ಆಗಮಿಸುವ ವೇಳೆಗೆ ಯುವಕ ತನ್ನ ಬೈಕನ್ನು ಬಿಟ್ಟು ಪರಾರಿಯಾಗಿರುವ ಘಟನೆ ಕೆಲ ದಿನಗಳ ಹಿಂದೆ ನಡೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಸುಮಾರು 25ಕ್ಕೂ ಹೆಚ್ಚು ನೊಂದ ಗ್ರಾಮಸ್ಥರು ಎಂಬ ಹೆಸರಿನಲ್ಲಿ ಯುವಕನ ವಿರುದ್ದ ಗುರುವಾರದಂದು ಕಡಬ ಠಾಣೆಗೆ ದೂರು ನೀಡಿದ್ದಾರೆ.
ಇಚ್ಲಂಪಾಡಿ-ದೇರಾಜೆ ರಸ್ತೆಯ ಕೊಕ್ಕೊ ಕಾಡಿನಲ್ಲಿ ಸಜೀವ ಎಂಬ ವ್ಯಕ್ತಿಯು ಸ್ಥಳೀಯ ಪರಿಶಿಷ್ಟ ವರ್ಗದ ಯುವತಿಯೊಂದಿಗೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾನೆ ಎಂಬ ಮಾಹಿತಿ ದಲಿತ ಸೇವಾ ಸಮಿತಿಯ ಕಾರ್ಯಕರ್ತರಿಗೆ ಸಿಕ್ಕಿದ್ದು ಅವರು ಸ್ಥಳೀಯರೊಂದಿಗೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಸ್ಥಳಕ್ಕೆ ಬಂದಿದ್ದರು. ಇದನ್ನು ಗಮನಿಸಿದ ಯುವಕ ತನ್ನ ಬೈಕನ್ನು ಬಿಟ್ಟು ಪರಾರಿಯಾಗಿದ್ದನೆನ್ನಲಾಗಿದೆ. ಬಳಿಕ ಪುತ್ತೂರು ದಲಿತ ಸೇವಾ ಸಮಿತಿಯ ಅಧ್ಯಕ್ಷ ರಾಜು ಹೊಸ್ಮಠ ಹಾಗೂ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದು ಬೈಕನ್ನು ಪೊಲೀಸರು ಠಾಣೆಯಲ್ಲಿರಿಸಿದ್ದಾರೆ. ಯುವತಿ ಯುವಕನ ವಿರುದ್ದ ದೂರು ನೀಡದೆ ಇರುವುದರಿಂದ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿರಲಿಲ್ಲ. ಆದರೆ ಇದೀಗ ಸಜೀವ ಎಂಬವರ ವಿರುದ್ದ ಅಲ್ಲಿಯ ಸುಮಾರು 25 ಕ್ಕೂ ಹೆಚ್ಚಿನ ಗ್ರಾಮಸ್ಥರು ಗ್ರಾಮದ ಹೆಣ್ಣು ಮಕ್ಕಳ ಸಾಮಾಜಿಕ ಜೀವನಕ್ಕೆ ಧಕ್ಕೆ ತರುವ ಯುವಕನ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೂರು ನೀಡಿದ್ದಾರೆ.
ಸಜೀವ ಎಂಬ ಯುವಕ ಈ ಹಿಂದೆ ಪೊಕ್ಸೋ ಕಾಯ್ದೆಯಡಿ ಜೈಲಿಗೆ ಹೋಗಿ ಬಂದವನಾಗಿದ್ದು, ಈತನಿಂದ ಪರಿಸರದ ಹೆಣ್ಣು ಮಕ್ಕಳಿಗೆ ತೊಂದರೆಯಾಗುತ್ತಿದೆ. ಮಾನ ಪ್ರಾಣಕ್ಕೆ ಹೆದರಿ ಯಾರೂ ದೂರು ಕೊಡಲು ಮುಂದೆ ಬರುತ್ತಿಲ್ಲ. ಕೂಡಲೇ ಈತನ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ದಲಿತ ಸೇವಾ ಸಮಿತಿಯ ಪುತ್ತೂರು ತಾಲೂಕು ಅಧ್ಯಕ್ಷ ರಾಜು ಹೊಸ್ಮಠ ಹೇಳಿಕೆ ನೀಡಿದ್ದಾರೆ.