ಬಿಹಾರ ಚುನಾವಣೆ: ಬೆಂಗಳೂರಿನಲ್ಲಿರುವ ಬಿಹಾರದ ವಲಸೆ ಕಾರ್ಮಿಕರನ್ನು ಓಲೈಸಲು ಬರುತ್ತಿದೆ ಬಿಹಾರ ನಾಯಕರ ದಂಡು..!

(ನ್ಯೂಸ್ಕಡಬ) newskadaba.com  . 14. ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ, ಅಲ್ಲಿನ ರಾಜಕೀಯ ಪಕ್ಷಗಳ ನಾಯಕರು ಬೆಂಗಳೂರಿನಲ್ಲಿ ನೆಲೆಸಿರುವ ಲಕ್ಷಾಂತರ ಬಿಹಾರಿ ಮತದಾರರನ್ನು ಸೆಳೆಯಲು ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ.

ಬಿಹಾರದ ಚುನಾವಣೆಯಲ್ಲಿ ತಮ್ಮ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಲು ಪ್ರಮುಖ ರಾಜಕೀಯ ನಾಯಕರು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಸ್ಥಾಪಿಸಿದ ‘ಜನ ಸುರಾಜ್ ಪಕ್ಷ’ದ ಮುಖಂಡ ಮನೋಜ್ ಭಾರತಿ ಹಾಗೂ ಬಿಜೆಪಿ ಸಂಸದ ಮನೋಜ್ ತಿವಾರಿ ಅವರಂತಹ ನಾಯಕರು ಬಿಹಾರಿಗಳ ಪ್ರಾಬಲ್ಯವಿರುವ ಹೆಬ್ಬಾಳ, ವಿದ್ಯಾರಣ್ಯಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ರಾಜ್ಯದಲ್ಲಿ 15 ಲಕ್ಷಕ್ಕೂ ಅಧಿಕ ಬಿಹಾರಿಗಳು:

ಕರ್ನಾಟಕದಲ್ಲಿ ಸುಮಾರು 15 ಲಕ್ಷಕ್ಕೂ ಅಧಿಕ ಬಿಹಾರ ಮೂಲದ ಜನರು ನೆಲೆಸಿದ್ದು, ಈ ಬಾರಿ ಬಿಹಾರದ ರಾಜಕೀಯದಲ್ಲಿ ಬದಲಾವಣೆ ತರುವ ಸಾಮರ್ಥ್ಯ ಇವರಿಗಿದೆ ಎಂದು ಕರ್ನಾಟಕದ ಬಿಹಾರ ಮೂಲದ ಸಂಘಟನೆಯಾದ ‘ಸಿದ್ಧಾರ್ಥ ಸಂಸ್ಕೃತಿ ಸಮಿತಿ’ಯ ಪ್ರತಿನಿಧಿ ರಾಮ್ ಕೆವಲ್ ಸಿಂಗ್ ತಿಳಿಸಿದ್ದಾರೆ.

ಸಿಂಗ್ ಅವರ ಪ್ರಕಾರ, ಬಿಹಾರದಲ್ಲಿ ಸರಿಯಾದ ಅಭಿವೃದ್ಧಿ ಆಗದಿರುವ ಕಾರಣ ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಅತಿ ಹೆಚ್ಚು ಬಿಹಾರಿಗಳು ಬೆಂಗಳೂರಿನಲ್ಲಿ ಇದ್ದಾರೆ. “ಬಿಹಾರದ ಭವಿಷ್ಯಕ್ಕಾಗಿ ಮತ ಚಲಾಯಿಸಲು ಅವರಿಗೆ (ಬೆಂಗಳೂರಿನ ಬಿಹಾರಿಗಳಿಗೆ) ಸೂಚಿಸಲಾಗಿದೆ” ಎಂದು ಸಿಂಗ್ ಹೇಳಿದರು.

ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿರುವ ಬಿಹಾರಿ ಮತದಾರರು ತಮ್ಮ ತಾಯ್ನಾಡಿನ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಲು ಸಿದ್ಧರಾಗಿದ್ದಾರೆ.

Scroll to Top