(ನ್ಯೂಸ್ ಕಡಬ) newskadaba.com, ಸೆ.27 ದಾವಣಗೆರೆ: ಬಿಕಾಂ, ಎಂಕಾಂ ಪದವಿ ನಂತರ ಬಿಇಡಿ ಮಾಡಿ ಶಿಕ್ಷಕರ ಅರ್ಹತಾ ಪರೀಕ್ಷೆ ಪಾಸಾದರೂ ಅವರಿಗೆ ಶಿಕ್ಷಕರಾಗುವ ಅವಕಾಶ ಸರ್ಕಾರ ನೀಡಿಲ್ಲ. ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ನೇಮಕಾತಿಯಲ್ಲಿಇವರನ್ನು ಪರಿಗಣಿಸದೆ ಇರುವ ಕಾರಣಕ್ಕೆ ರಾಜ್ಯಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಹತ್ತಾರು ವರ್ಷಗಳಿಂದ ತ್ರಿಶಂಕು ಸ್ಥಿತಿಯಲ್ಲಿ ನರಳುತ್ತಿದ್ದಾರೆ.
”ಬಿಕಾಂ, ಎಂಜಿನಿಯರಿಂಗ್ ಪದವೀಧರರಿಗೆ 2015ರಲ್ಲಿಸರ್ಕಾರ ಬಿಇಡಿ ಮಾಡಲು ಅವಕಾಶ ನೀಡಿತು. ನಂತರ 2020ರಲ್ಲಿಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆಯಲು ಕೂಡ ಅವಕಾಶ ನೀಡಿದೆ. ಆದರೆ ಶಿಕ್ಷಕರ ನೇಮಕಾತಿಗೆ ಮಾತ್ರ ಪರಿಗಣಿಸುತ್ತಿಲ್ಲ. ಬಿಕಾಂ ಪದವೀಧರರು ಬಿಇಡಿನಲ್ಲಿಇಂಗ್ಲಿಷ್ ಹಾಗೂ ಸಮಾಜ ವಿಜ್ಞಾನವನ್ನೂ ಎರಡು ಮುಖ್ಯ ವಿಷಯವನ್ನಾಗಿ ಅಯ್ಕೆ ಮಾಡಿಕೊಂಡು ಓದಿರುತ್ತಾರೆ. ತರಬೇತಿ ಅವಧಿಯಲ್ಲೂ ಇಂಗ್ಲಿಷ್ ಮತ್ತು ಸಮಾಜ ವಿಜ್ಞಾನ ಬೋಧಿಸುತ್ತೇವೆ, ಅದಕ್ಕೆ ಅಂಕಗಳನ್ನು ಕೂಡ ಪಡೆಯುತ್ತೇವೆ. ಮೂರು ವರ್ಷ ಬಿಕಾಂ ಪದವಿ ಮಾಡುವಾಗ ಅರ್ಥಶಾಸ್ತ್ರ, ವಾಣಿಜ್ಯ ಶಾಸ್ತ್ರ ಅಧ್ಯಯನ ಮಾಡಿರುತ್ತೇವೆ.
ಈ ಹಿಂದೆ ಪಿಯು ಕಾಲೇಜು ಉಪನ್ಯಾಸಕರಾಗಲು ಬಿಇಡಿ ಕಡ್ಡಾಯ ಮಾಡಲಾಗಿತ್ತು. ಆಗ ಬಿಕಾಂ ಮಾಡಿದವರಿಗೆ ಬಿಇಡಿ ಮಾಡಲು ಅವಕಾಶ ನೀಡಲಾಯಿತು ಅಷ್ಟೇ ಎಂದು ಬಿಇಡಿ ಕಾಲೇಜು ಉಪನ್ಯಾಸಕರೊಬ್ಬರು ಹೇಳುತ್ತಾರೆ. ಆದರೆ ಬಿಕಾಂ ಮೇಲೆ ಬಿಇಡಿ ಮಾಡಿದವರ ನೇಮಕಾತಿಗೆ ಇರುವ ಅಡ್ಡಿಗಳನ್ನು ಸರ್ಕಾರ ನಿವಾರಿಸಬೇಕು. ಶಿಕ್ಷಕರಾಗುವ ಎಲ್ಲಶಿಕ್ಷಣ, ಅರ್ಹತೆ ಪಡೆದುಕೊಂಡಿರುವ ಪದವೀಧರರ ಶಿಕ್ಷಕರಾಗುವ ಕನಸನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.













