(ನ್ಯೂಸ್ ಕಡಬ) newskadaba.com, ಸೆ.27 ಕಡಬ: ಅರಣ್ಯ ಇಲಾಖೆಯ ಜಾಗವನ್ನು ಅತಿಕ್ರಮಿಸಿರುವುದನ್ನು ತೆರವು ಮಾಡುವಂತೆ ಮೇಲ್ಮನವಿ ಪ್ರಾಧಿಕಾರ ಮತ್ತು ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ವೃತ್ತದ ನಿರ್ದೇಶನದ ಮೇರೆಗೆ ಕಡಬ ತಾಲೂಕಿನ ಏನೆಕಲ್ಲು ಗ್ರಾಮದಲ್ಲಿ ಅತಿಕ್ರಮಣಗೊಂಡಿದ್ದ ಮೀಸಲು ಅರಣ್ಯ ಭೂಮಿಯನ್ನು ಅರಣ್ಯಾಧಿಕಾರಿಗಳು ಶುಕ್ರವಾರ ತೆರವುಗೊಳಿಸಿದ್ದಾರೆ.
ವರದಿಗಳ ಪ್ರಕಾರ, ಕುಮಾರ್ ಪಿ. ಎಂಬುವವರು ಏನೆಕಲ್ಲು ಗ್ರಾಮದಲ್ಲಿ 1.44 ಎಕರೆ ಮೀಸಲು ಅರಣ್ಯ ಪ್ರದೇಶವನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸಿದ್ದು, ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾದ ನಂತರ ತನಿಖೆ ನಡೆಸಲಾಯಿತು. ಲೋಕಾಯುಕ್ತದ ನಿರ್ದೇಶನದ ಮೇರೆಗೆ, ಮಂಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಪಂಜ ವಲಯ ಅರಣ್ಯಾಧಿಕಾರಿಗಳಿಗೆ ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದರು.
ತನಿಖಾ ವರದಿಯ ಆಧಾರದ ಮೇಲೆ, ಕುಮಾರ್ ಅವರಿಗೆ ಅತಿಕ್ರಮಣ ಮಾಡಿರುವ ಅರಣ್ಯ ಭೂಮಿ, ಕಟ್ಟಡಗಳು ಮತ್ತು ಬೆಳೆಗಳನ್ನು7 ದಿನಗಳೊಳಗೆ ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ತಪ್ಪಿದಲ್ಲಿ ಪಂಜ ಅರಣ್ಯಾಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸುವ ಎಚ್ಚರಿಕೆಯನ್ನು ನೀಡಲಾಗಿತ್ತು. ಕುಮಾರ್ ಅವರು ಅತಿಕ್ರಮಣಗೊಂಡ ಭೂಮಿಯನ್ನು ತೆರವುಗೊಳಿಸದ ಹಿನ್ನೆಲೆ, ಶುಕ್ರವಾರ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.













