(ನ್ಯೂಸ್ ಕಡಬ) newskadaba.com, ಸೆ.23 ಬೆಂಗಳೂರು: ಶೀಲ ಶಂಕಿಸಿ ತನ್ನ 2ನೇ ಪತ್ನಿಗೆ 11ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬ ಭೀಕರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಸುಂಕದಕಟ್ಟೆ ಬಸ್ ನಿಲ್ದಾಣದ ಬಳಿ ಸೋಮವಾರ ನಡೆದಿದೆ.
ಕೆಬ್ಬೆಹಳ್ಳದ ನಿವಾಸಿ ರೇಖಾ (32) ಕೊಲೆಯಾದ ದುರ್ದೈವಿ. ಹತ್ಯೆ ಬಳಿಕ ಮೃತಳ ಪ್ರಿಯಕರ ಲೋಹಿತಾಶ್ವ ಅಲಿಯಾಸ್ ಲೋಕೇಶ್ ಪರಾರಿಯಾಗಿದ್ದಾನೆ. ಆರೋಪಿ ಸುಂಕದಕಟ್ಟೆ ಬಸ್ ನಿಲ್ದಾಣದ ಬಳಿ ರೇಖಾ ಮೇಲೆ ಏಕಾಏಕಿ ಚೂರಿಯಿಂದ ದಾಳಿ ನಡೆಸಿದ್ದಾನೆ. ಆಕೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮೊದಲ ಪತಿಯಿಂದ ಪ್ರತ್ಯೇಕವಾಗಿದ್ದ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ರೇಖಾ, ತನ್ನ ಮಕ್ಕಳ ಜತೆ ವಾಸವಾಗಿದ್ದರು. ಹಾಗೆಯೇ ತನ್ನ ಪತ್ನಿಯಿಂದ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಲೋಕೇಶ್ ಸಹ ದೂರವಾಗಿದ್ದ. ನಗರದಲ್ಲಿ ಇಬ್ಬರಿಗೂ ಸ್ನೇಹವಾಗಿದೆ. ಬಳಿಕ ಕಾಲ ಕ್ರಮೇಣ ಅದೂ ಪ್ರೇಮಕ್ಕೆ ತಿರುಗಿದೆ.
ಬಳಿಕ ಶಿರಾ ತೊರೆದು ಬೆಂಗಳೂರಿಗೆ ಬಂದು ಲಿವಿಂಗ್ ಟುಗೆದರ್‌ನಲ್ಲಿ ಪ್ರೇಮಿಗಳು ನೆಲೆಸಿದ್ದರು ಟೆಲಿಕಾಲರ್ ಕಂಪನಿಯಲ್ಲಿ ರೇಖಾ ಕೆಲಸ ಮಾಡುತ್ತಿದ್ದಳು. 3 ತಿಂಗಳ ಹಿಂದೆ ಇಬ್ಬರೂ 2ನೇ ವಿವಾಹವಾಗಿದ್ದರು. ಈ ಮದುವೆ ಬಳಿಕ ತನ್ನ ಇಬ್ಬರು ಮಕ್ಕಳ ಪೈಕಿ ಕಿರಿಯ ಮಗಳನ್ನು ತವರು ಮನೆಗೆ ಬಿಟ್ಟು ರೇಖಾ ಓದಿಸುತ್ತಿದ್ದಳು. ಇನ್ನು ಮದುವೆ ನಂತರ ತನ್ನ ಕಂಪನಿಯಲ್ಲಿ ಪತಿಗೆ ಕೂಡ ರೇಖಾ ಕೆಲಸ ಕೊಡಿಸಿದ್ದಳು.












