(ನ್ಯೂಸ್ ಕಡಬ) newskadaba.com, ಸೆ.12 ಬೆಂಗಳೂರು: ಸಿನಿಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ದುಬಾರಿ ಸಿನಿಮಾ ಟಿಕೆಟ್ ದರಕ್ಕೆ (Movie ticket price) ಕಡಿವಾಣ ಹಾಕಲು ರಾಜ್ಯ ಸರ್ಕಾರ ಸರ್ಕಾರ ಏಕರೂಪ ಟಿಕೆಟ್ ದರ ಜಾರಿಗೆ ತರುವುದಾಗಿ ಹೇಳಿದೆ. ಇಂದಿನಿಂದ (ಸೆ.12) ಈ ನಿಯಮ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.
ಇದರ ಪ್ರಕಾರ ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್ನಲ್ಲಿ ಟಿಕೆಟ್ನ ಮೂಲ ಬೆಲೆ 200 ರೂಪಾಯಿ ದಾಟುವಂತಿಲ್ಲ. ಶೇ.18 ತೆರಿಗೆಯೂ ಸೇರಿದರೆ ಸಿನಿಮಾದ ಟಿಕೆಟ್ ದರ 236 ರೂಪಾಯಿ ಆಗಲಿದೆ. ಸಿನಿಮಾ ಪ್ರಿಯರಿಗೆ ಇದರಿಂದ ಕೊಂಚ ಸಮಾಧಾನವಾಗಿದೆ.
ಇನ್ನು ಕೆಲವು ಷರತ್ತುಗಳನ್ನು ಕೂಡ ಸರ್ಕಾರ ಹೇರಿದೆ. ಅನೇಕ ಮಲ್ಟಿಪ್ಲೆಕ್ಸ್ಗಳಲ್ಲಿ ಗೋಲ್ಡ್ ಕ್ಲಾಸ್ ವ್ಯವಸ್ಥೆ ಇರುತ್ತವೆ. ಇವುಗಳಿಗೆ 200 ರೂಪಾಯಿ ಟಿಕೆಟ್ ದರದ ಮಿತಿ ಇಲ್ಲ. ಆ ಆಸನಗಳಿಗೆ ಮಲ್ಟಿಪ್ಲೆಕ್ಸ್ಗಳು ತಮ್ಮಿಷ್ಟದ ದರ ನಿಗದಿ ಮಾಡಬಹುದು. ಬಹುತೇಕ ಮಲ್ಟಿಪ್ಲೆಕ್ಸ್ಗಳಲ್ಲಿ ರಿಕ್ಲೈನ್ ಸೀಟ್ಗಳು ಇರುತ್ತವೆ. ಅವುಗಳಿಗೂ 200 ರೂಪಾಯಿ ಟಿಕೆಟ್ ದರ ಅನ್ವಯ ಆಗುತ್ತದೆ ಎಂದು ತಿಳಿದುಬಂದಿದೆ.
ಕರ್ನಾಟಕ ಸಿನಿಮಾಗಳ (ನಿಯಂತ್ರಣ) ಕಾಯ್ದೆ, 1964ರ ಸೆಕ್ಷನ್ 19ರಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಲು ಕರ್ನಾಟಕ ಸಿನಿಮಾಗಳ (ನಿಯಂತ್ರಣ) ನಿಯಮಗಳು, 2014 ಅನ್ನು ಮತ್ತಷ್ಟು ತಿದ್ದುಪಡಿ ರಾಜ್ಯ ಸರ್ಕಾರ ಇತ್ತೀಚೆಗೆ ಕರಡು ರೂಪಿಸಿತ್ತು. ಈ ಕರಡನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿದ ದಿನಾಂಕದಿಂದ 15 ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿತ್ತು. ಅದರಂತೆ ಸೆ.12ರಿಂದ ಏಕರೂಪ ಟಿಕೆಟ್ ದರ ಜಾರಿಯಾಗಿದೆ.













