ವಿಶ್ವ ನಂ.1 ಆಟಗಾರ್ತಿ ಅರೈನಾ ಸಬಲೆಂಕಾ ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್‌ನಲ್ಲಿ ಸತತ ಎರಡನೇ ಬಾರಿಗೆ ಜಯ



(ನ್ಯೂಸ್‌ ಕಡಬ) newskadaba.com,  ಸೆ.08 ನ್ಯೂಯಾರ್ಕ್‌ : ಬೆಲಾರುಸ್‌ನ ಟೆನಿಸ್‌ ತಾರೆ, ವಿಶ್ವ ನಂಬರ್‌ 1 ಆಟಗಾರ್ತಿ ಅರೈನಾ ಸಬಲೆಂಕಾ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಸತತ 2ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ತಮ್ಮ ಒಟ್ಟಾರೆ ಗ್ರ್ಯಾನ್‌ಸ್ಲಾಂ ಕಿರೀಟಗಳ ಗಳಿಕೆಯನ್ನು 4ಕ್ಕೆ ಹೆಚ್ಚಿಸಿದ್ದಾರೆ. ಭಾರತೀಯ ಕಾಲಮಾನ ಶನಿವಾರ ಮಧ್ಯರಾತ್ರಿ ನಡೆದ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ 27 ವರ್ಷದ ಸಬಲೆಂಕಾ, ಅಮೆರಿಕದ ಅಮಾಂಡ ಅನಿಸಿಮೋವಾ ವಿರುದ್ಧ 6-3, 7-6(7/3) ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು.





ಕ್ರೀಡಾಂಗಣದಲ್ಲಿ ತುಂಬಿದ್ದ ಬಹುತೇಕ ಪ್ರೇಕ್ಷಕರ ಬೆಂಬಲ ಸ್ಥಳೀಯ ಆಟಗಾರ್ತಿಯಾಗಿರುವ ಅಮಾಂಡಗೆ ಇದ್ದರೂ, ಅದು ಸಬಲೆಂಕಾರ ಅಭೂತಪೂರ್ವ ಆಟದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಮೊದಲ ಸೆಟ್‌ ಅನ್ನು ಸುಲಭದಲ್ಲಿ ಗೆದ್ದ 27 ವರ್ಷದ ಸಬಲೆಂಕಾ, 2ನೇ ಸೆಟ್‌ನಲ್ಲಿ 8ನೇ ಶ್ರೇಯಾಂಕಿತ ಅಮಾಂಡರಿಂದ ತೀವ್ರ ಪ್ರತಿರೋಧ ಎದುರಿಸಿದರು. ಆದರೆ ತಮ್ಮ ಅನುಭವ ಬಳಸಿಕೊಂಡ ಸಬಲೆಂಕಾ, ಟೈ ಬ್ರೇಕರ್‌ನಲ್ಲಿ ಗೆಲುವು ತಮ್ಮದಾಗಿಸಿಕೊಂಡರು. 2023ರಲ್ಲಿ ಯುಎಸ್‌ ಓಪನ್‌ ಫೈನಲ್‌ಗೇರಿದ್ದ ಸಬಲೆಂಕಾ, ಅಮೆರಿಕದ ಕೊಕೊ ಗಾಫ್‌ ವಿರುದ್ಧ ಸೋತು ರನ್ನರ್‌-ಅಪ್‌ ಆಗಿದ್ದರು. ಕಳೆದ ವರ್ಷ ಅಮೆರಿಕದ ಜೆಸ್ಸಿಕಾ ಪೆಗುಲಾರನ್ನು ಸೋಲಿಸಿ ಚೊಚ್ಚಲ ಯುಎಸ್‌ ಓಪನ್‌ ಪಡೆದಿದ್ದರು. ಈ ವರ್ಷವೂ ಅವರಿಗೆ ಫೈನಲ್‌ನಲ್ಲಿ ಅಮೆರಿಕದ ಆಟಗಾರ್ತಿ ಎದುರಾಗಿದ್ದು ವಿಶೇಷ.






ಗ್ರ್ಯಾನ್‌ಸ್ಲಾಂ ಕನಸು ಭಗ್ನ: ಅಮಾಂಡ ಕೆಲ ತಿಂಗಳುಗಳ ಅಂತರದಲ್ಲೇ 2 ಬಾರಿ ಗ್ರ್ಯಾನ್‌ಸ್ಲಾಂ ಫೈನಲ್‌ ಸೋತು, ಟ್ರೋಫಿ ತಪ್ಪಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ವಿಂಬಲ್ಡನ್‌ ಟೂರ್ನಿಯ ಫೈನಲ್‌ಗೇರಿದ್ದ 24 ವರ್ಷದ ಅಮಾಂಡ, ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ವಿರುದ್ಧ ಸೋತಿದ್ದರು. ಈ ಬಾರಿ ಸಬಲೆಂಕಾ ವಿರುದ್ಧ ಸೋತಿದ್ದು, ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆಲ್ಲುವ ಕನಸು ಭಗ್ನಗೊಂಡಿದೆ.

error: Content is protected !!
Scroll to Top