(ನ್ಯೂಸ್ ಕಡಬ) newskadaba.com, ಸೆ.02: ದೇವಳಗಳನ್ನೇ ಟಾರ್ಗೆಡ್ ಮಾಡಿ ಕಳವು ಮಾಡುತ್ತಿದ್ದ ಹೊರ ರಾಜ್ಯದ ಮೂವರು ಖದೀಮರನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿ 6.50 ಲಕ್ಷ ರೂ. ಮೌಲ್ಯದ 22 ವಿವಿಧ ದೇವರ ವಿಗ್ರಹಗಳನ್ನು ವಶಪಡಿಸಿಕೊಂಡಿದ್ದಾರೆ.
ಕನ್ನಮಂಗಲದ ಖಾಜಿಸೊನ್ನೇನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದ ಪಶ್ಚಿಮ ಬಂಗಾಳ ಮೂಲದ ಮೊಹಮದ್ ರಬ್ಬಿ (22),ಮೊಹಮದ್ ಯೂಸೂಫ್ (20) ಮತ್ತು ಮೊಹಮದ್ ಬಾಬು (20) ಬಂಧಿತ ಆರೋಪಿಗಳು.ಈ ಮೂವರು ನಗರದಲ್ಲಿ ವಾಸವಾಗಿದ್ದುಕೊಂಡು ಇಬ್ಬರು ಕಾರು ವಾಷಿಂಗ್ ಕೆಲಸ ಹಾಗೂ ಮತ್ತೊಬ್ಬ ಚಿಂದಿ ಆಯುವ ಕೆಲಸ ಮಾಡುತ್ತಿದ್ದನು.
ಖಾಜಿಸೊನ್ನೇನಹಳ್ಳಿ ಗ್ರಾಮದಲ್ಲಿರುವ ಮುನೇಶ್ವರಸ್ವಾಮಿ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿ ದೇವರ ವಿಗ್ರಹಗಳು, ಹುಂಡಿಯ ಹಣ, ಗಂಟೆಗಳನ್ನು ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದರು.
ಈ ಬಗ್ಗೆ ದೇವಾಲಯದ ಅರ್ಚಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಆತನ ಬಳಿ ಕಟಿಂಗ್ ಪ್ಲೇಯರ್, ಆಕ್ಸೆಲ್ ಬ್ಲೇಡ್, ಕಬ್ಬಿಣದ ರಾಡ್ ಕಂಡು ಬಂದಿದೆ.
ನಂತರ ಆತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ, ಮತ್ತಿಬ್ಬರು ಸಹಚರರೊಂದಿಗೆ ಸೇರಿಕೊಂಡು ದೇವಸ್ಥಾನದಲ್ಲಿ ಕಳ್ಳತನ ಮಾಡಿರುವುದಾಗಿ ಹಾಗೂ ಹೊಸಕೋಟೆಯ ದೇವಸ್ಥಾನದಲ್ಲಿ ಮತ್ತು ಆವಲಹಳ್ಳಿಯಲ್ಲಿ ಆಟೋರಿಕ್ಷಾ ಕಳವು ಮಾಡಿರುವುದಾಗಿ ಹೇಳಿದ್ದಾನೆ.














