ನಾವು ಸದಾ ನಿಮ್ಮೊಂದಿಗಿದ್ದೇವೆ: RCB ಭಾವುಕ ಪೋಸ್ಟ್‌

(ನ್ಯೂಸ್‌ ಕಡಬ) newskadaba.com, ಆ.28:‌‌ ಬೆಂಗಳೂರಿನ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಿಂದ ನೋವು ಅನುಭವಿಸಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಆಡಳಿತ ಮಂಡಳಿ ಈಗ ಅಭಿಮಾನಿಗಳಿಗಾಗಿ ಕೇರ್‌ ಸೆಂಟರ್‌ ತೆರೆಯಲು ಆರಂಭಿಸಿದೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾವುಕ ಪೋಸ್ಟ್‌ವೊಂದನ್ನು ಮಾಡಿರುವ ಆರ್‌ಸಿಬಿ, ನಾವು ಪೋಸ್ಟ್‌ ಮಾಡಿ ಸುಮಾರು ಮೂರು ತಿಂಗಳಕಾಲ ಕಳೆದಿದೆ. ನಮ್ಮ ಮೌನ, ಖಾಲಿತನದಿಂದಷ್ಟೇ ಅಲ್ಲ, ದುಃಖದಿಂದ ತುಂಬಿದ ತೀವ್ರವಾದ ಮೌನ. ಈ ಮಾಧ್ಯಮದ ಮುಖಾಂತರ ನೀವೆಲ್ಲಾ ಸಂತೋಷದಿಂದ ಸಂಭ್ರಮಿಸುವ ವಿಷಯಗಳನ್ನು ಮತ್ತು ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದೆವು. ಆದರೆ, ಜೂ.4ರ ಘಟನೆ ಎಲ್ಲವನ್ನನೂ ಬದಲಾಯಿಸಿತು. ಈ ದಿನ ನಮ್ಮ ಹೃದಯವನ್ನು ಮುರಿಯಿತು. ನಂತರ ಮೌನವು ಕೇವಲ ನಿಶ್ಶಬ್ಧವಲ್ಲ, ಅದು ಶ್ರದ್ಧೆಯಿಂದ ತುಂಬಿದ ಶಾಂತ ಶ್ರದ್ದಾಂಜಲಿ. ಈ ಮೌನದೊಳಗೆ ನೋವನ್ನು ಅನುಭವಿಸುತ್ತಾ ನಾವು ಆಳವಾಗಿ ಯೋಚಿಸಿದ್ದೆವು ಮತ್ತು ಅನೇಕ ವಿಷಯಗಳನ್ನು ಕಲಿತೆವು. ನೋವನ್ನೇ ಶ್ರದ್ದೆಯಾಗಿ, ನಂಬಿಕೆಯಾಗಿ ರೂಪಿಸಬೇಕೆಂದು ತೀರ್ಮಾನಿಸಿದ್ದೆವು. ಅದರ ಫಲವೇ ಆರ್‌ಸಿಬಿ ಕೇರ್ಸ್.‌ ನಮ್ಮ ಅಭಿಮಾನಿಗಳು ಮತ್ತು ಸಮುದಾಯಕ್ಕಾಗಿ ನಿಷ್ಠೆಯಿಂದ ರೂಪಿಸಿದ ಯೋಜನೆ. ಇಂದು ನಾವು ಮರಳಿದ್ದೇವೆ: ನಿಮ್ಮೊಂದಿಗೆ ನಿಲ್ಲುವ ಭರವಸೆಯನ್ನು ನೀಡುತ್ತಾ, ಕರ್ನಾಟಕದ ಹೆಮ್ಮೆಯಾಗಿ ಮುಂದೆ ಸಾಗುತ್ತೇವೆ. ಇದು ನಮ್ಮ ಕಾಳಜಿ, ನಮ್ಮ ಪ್ರತಿಜ್ಞೆ. ಆರ್‌ಸಿಬಿ ಕೇರ್ಸ್‌: ನಾವು ಸದಾ ನಿಮ್ಮೊಂದಿಗಿದ್ದೇವೆ. ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಎಂದು ಬರೆದುಕೊಂಡಿದೆ.

Scroll to Top