(ನ್ಯೂಸ್ ಕಡಬ) newskadaba.com ಆ. 19. ಪವಿತ್ರ ಕುರಾನ್ ನ 30 ಕಾಂಡ(ಜುಝ್)ಗಳನ್ನು ಕೈಯಲ್ಲಿ ಬರೆಯುವ ಮೂಲಕ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಪುತ್ತೂರು ತಾಲೂಕಿನ ಬೈತಡ್ಕ ಇಸ್ಮಾಯಿಲ್ ಹಾಜಿ ಮತ್ತು ಝಕ್‌ರಾ ಜಾಸ್ಮಿನ್ ದಂಪತಿ ಪುತ್ರಿ ಸಜ್‌ಲ ಇಸ್ಮಾಯಿಲ್ ಅವರು ಗಮನ ಸೆಳೆದಿದ್ದಾರೆ.
2021ರ ಜನವರಿಯಲ್ಲಿ ಕುರಾನ್ ಬರವಣಿಗೆಯನ್ನು ಆರಂಭಿಸಿದ್ದ ಅವರು 2025ರ ಆಗಸ್ಟ್ ನಲ್ಲಿ ಪೂರ್ಣಗೊಳಿಸಿದ್ದಾರೆ. ಸಜ್‌ಲ ಅವರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದರು. ಪ್ರಸ್ತುತ ಅವರು ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ.
ಒಟ್ಟು 604 ಪುಟಗಳ ಈ ಕೃತಿಗೆ ಬಿಳಿ, ತಿಳಿನೀಲಿ, ತಿಳಿ ಹಸಿರು ಬಣ್ಣದ ಕಾಗದವನ್ನು ಬಳಸಿದ್ದಾರೆ. ಇದಕ್ಕೆ ಆಕರ್ಷಕವಾದ ಕೆಂಪು ಮತ್ತು ಸ್ವರ್ಣ ವರ್ಣದ ಹೊರ ಕವಚವನ್ನು ಹೊದಿಸಲಾಗಿದೆ. ಈ ಕೃತಿಯು ಸುಮಾರು 14 ಕೆ.ಜಿ. ತೂಕ ಇದೆ.
“ಒಂದು ಪುಟ ಬರೆಯಲು ನನಗೆ ಸುಮಾರು ನಾಲ್ಕು ಗಂಟೆ ಬೇಕಾಗುತ್ತಿತ್ತು. ಕೆಲವು ದಿನಗಳಲ್ಲಿ 8 ಗಂಟೆ ಬಳಸಿ 2 ಪುಟಗಳನ್ನು ಬರೆಯಲು ಸಾಧ್ಯವಾಯಿತು. ಒಟ್ಟಾರೆ ಸಂಪೂರ್ಣ ಕುರಾನ್ ಅನ್ನು ಒಟ್ಟು 303 ದಿನಗಳಲ್ಲಿ ಬರೆದು ಮುಗಿಸಿದ್ದೇನೆ. ಕುರಾನ್ ಅನ್ನು ಬರೆದು ಮುಗಿಸಲು 2,416 ಗಂಟೆ ಬಳಕೆಯಾಗಿದೆ” ಎಂದು ಸಜ್‌ಲ ತಿಳಿಸಿದ್ದಾರೆ.
ಈ ಕೃತಿಯನ್ನು ಶನಿವಾರ ಕುಂಬ್ರದ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಕೇರಳದ ಮರ್ಕಝ್ ನಾಲೇಜ್ ಸಿಟಿಯ ಮುದರ್ರಿಸ್ ಯಾಸೀನ್ ಸಖಾಫಿ ಅಲ್ ಅಝ್ಹರಿ ಅವರು ಲೋಕಾರ್ಪಣೆಗೊಳಿಸಿದರು.









