(ನ್ಯೂಸ್ ಕಡಬ) newskadaba.com, ಆ.06: ಹೆಚ್ಚಿನ ಮಂದಿಗೆ ದಿನ ಆರಂಭವಾಗುವುದೇ ಬೆಳಗ್ಗಿನ ಒಂದು ಕಪ್ ಚಹಾ ಕುಡಿಯುವುದರಿಂದ ಕೆಲವರಂತೂ ದಿನಕ್ಕೆ 3-4 ಬಾರಿ ಚಹಾ ಕುಡಿಯುತ್ತಾರೆ. ಆದರೆ, ಹೆಚ್ಚಿನವರು ಚಹಾ ಮಾಡುವುದರಿಂದ ಹಿಡಿದು ಕುಡಿಯುವ ತನಕ ಒಂದಷ್ಟು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ ಎಂದು ಪೌಷ್ಟಿಕ ತಜ್ಞೆ ಕಿರಣ್ ಕುಕ್ರೇಜಾ ಹೇಳಿದ್ದಾರೆ.
ಹೆಚ್ಚಿನ ಮಂದಿ ತಮ್ಮ ಮನೆಯಲ್ಲಿ ಚಹಾ ಸೋಸಲು ಪ್ಲಾಸ್ಟಿಕ್ ಜರಡಿಯನ್ನು ಬಳಸುತ್ತಾರೆ. ಆದರೆ, ಇದು ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ಜರಡಿಯಲ್ಲಿ ಚಹಾ ಸೋಸುವುದರಿಂದ ಇದರಲ್ಲಿರುವ ಪ್ಲಾಸ್ಟಿಕ್ ಕಣಗಳು ಚಹಾಕ್ಕೆ ಸೇರುತ್ತವೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಸ್ಟೀಲ್ ಫಿಲ್ಟರ್ಗಳನ್ನು ಬಳಸುವುದು ಒಳ್ಳೆಯದು.
ಒಮ್ಮೆ ತಯಾರಿಸಿ ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವುದು ಒಳ್ಳೆಯದಲ್ಲ ಎನ್ನುತ್ತಾರೆ ಕಿರಣ್ ಕುಕ್ರೇಜಾ. ಹೀಗೆ ಮಾಡುವುದರಿಂದ ಚಹಾದಲ್ಲಿ ಆಮ್ಲೀಯತೆ ಹೆಚ್ಚುತ್ತದೆ. ಅಲ್ಲದೇ, ಹೊಟ್ಟೆಯಲ್ಲಿ ಜೀರ್ಣಕಾರಿ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಅನೇಕ ಮಂದಿ ಹಾಲಿಗೆ ಚಹಾ ಪುಡಿ ಹಾಕಿ ಚಹಾ ಮಾಡುತ್ತಾರೆ. ಇದು ಸೂಕ್ತ ವಿಧಾನ ಅಲ್ಲ ಎಂದಿದ್ದಾರೆ ಕಿರಣ್ ಕುಕ್ರೇಜಾ.ಹೀಗೆ ಮಾಡುವುದರಿಂದ ಅದರಲ್ಲಿರುವ ಪ್ರೋಟೀನ್, ಉತ್ಕರ್ಷಣ ನಿರೋಧಕ ಅಂಶ ಕಳೆದು ಹೋಗುತ್ತದೆ. ಹಾಗಾಗಿ ಸ್ವಲ್ಪ ನೀರಿನಲ್ಲಿ ಚಹಾ ಪುಡಿಯನ್ನು ಹಾಕಿ ಕುದಿಸಿ ಬಳಿಕ ಅದಕ್ಕೆ ಹಾಲು ಸೇರಿಸಬೇಕು. ಇದು ಚಹಾ ತಯಾರಿಸುವ ಸರಿಯಾದ ವಿಧಾನ ಎಂದಿದ್ದಾರೆ ಕಿರಣ್ ಕುಕ್ರೇಜಾ.













