ಹೊಸ ವಿಶ್ವ ದಾಖಲೆ ಬರೆದ ದೀಪಿಕಾ ಪಡುಕೋಣೆ..!

(ನ್ಯೂಸ್‌ ಕಡಬ) newskadaba.com, ಆ.05: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರು ಹೊಸ ವಿಶ್ವ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಈ ಮೂಲಕ ಅವರು ಭಾರತದ ಮಾತ್ರವಲ್ಲ ವಿಶ್ವದ ಸ್ಟಾರ್‌ ನಟಿಯರಲ್ಲಿ ಒಬ್ಬರು ಎಂದು ಸಾಬೀತು ಮಾಡಿದ್ದಾರೆ.

ದೀಪಿಕಾ ಅವರು ಸೋಶಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇವರು ಇನ್‌ಸ್ಟಾಗ್ರಾಂನಲ್ಲಿ ಸುಮಾರು 8 ಕೋಟಿ ಫಾಲೋವರ್‌ಗಳನ್ನು ಹೊಂದಿದ್ದಾರೆ. ಇವರು ಫೋಟೋಶೂಟ್‌, ಸಿನಿಮಾ ಮಾಹಿತಿ ಸೇರಿದಂತೆ ಜಾಹೀರಾತುಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ದೀಪಿಕಾ ಹಂಚಿಕೊಂಡಿದ್ದ ರೀಲ್ಸ್ ಒಂದು ವಿಶ್ವದಲ್ಲೇ ಅತೀ ಹೆಚ್ಚು ವೀಕ್ಷಣೆಗೆ ಒಳಪಟ್ಟ ರೀಲ್ಸ್‌ ಎನಿಸಿಕೊಂಡಿದೆ.

ದೀಪಿಕಾ ಹಿಲ್ಟನ್‌ ಹೋಟೆಲ್‌ನ ರಾಯಭಾರಿ ಆಗಿದ್ದು, ಇತ್ತೀಚೆಗೆ ಅವರು ಹಿಲ್ಟನ್‌ನ ಜಾಹೀರಾತಿನ ವಿಡಿಯೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದರು. ಇದೀಗ ಈ ರೀಲ್ಸ್‌ 1.9 ಬಿಲಿಯನ್‌ ವೀವ್ಸ್‌ ಕಂಡಿದೆ. ಈ ಹಿಂದೆ ಟೀಂ ಇಂಡಿಯಾ ಆಟಗಾರ ಹಾರ್ದಿಕ್‌ ಪಾಂಡ್ಯರ ರೀಲ್‌ ಒಂದು 1.6 ಬಿಲಿಯನ್‌ ವೀಕ್ಷಣೆ ಕಂಡಿತ್ತು. ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ರೀಲ್ಸ್‌ ಒಂದು 1.5 ಬಿಲಿಯನ್‌ ವೀವ್ಸ್‌ ಕಂಡಿತ್ತು. ಆದರೆ, ದೀಪಿಕಾ ಅವರ ರೀಲ್ಸ್‌ ಈ ಎಲ್ಲಾ ದಾಖಲೆಗಳನ್ನು ಮುರಿದಿದೆ. ಈ ಮೂಲಕ ದೀಪಿಕಾ ಪಡುಕೋಣೆ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ.

Scroll to Top