ಸ್ವಚ್ಛ ಗ್ರಾಮ ಖ್ಯಾತಿಯ ಕಡಬದಲ್ಲಿ ಮರೀಚಿಕೆಯಾದ ಸ್ವಚ್ಚತೆ ► ರಸ್ತೆಯಲ್ಲೇ ಹರಿಯುತ್ತಿದೆ ಹೊಟೇಲ್ ಗಳ ಹೊಲಸು ನೀರು

(ನ್ಯೂಸ್ ಕಡಬ) newskadaba.com ಕಡಬ, ಎ.12. ಕಡಬ ಪೇಟೆಯಲ್ಲಿ ಹೊಟೇಲ್ ಗಳ ದ್ರವ ತಾಜ್ಯ ಹರಿಯುವ ಪೈಪ್ ಒಡೆದು ಹೊಲಸು ನೀರು ರಸ್ತೆಯ ಬದಿಯಲ್ಲಿ ಉಕ್ಕಿ ಹರಿಯುತ್ತಿರುವ ಪರಿಣಾಮ ವಿಪರೀತ ದುರ್ವಾಸನೆ ಬೀರುತ್ತಿದ್ದು, ಸ್ಥಳೀಯ ವರ್ತಕರು ಹಾಗೂ ಸಾರ್ವಜನಿಕರು ಪಂಚಾಯತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಡಬ ಪೇಟೆಯ ಹೊಟೇಲ್ ಗಳು ಹಾಗೂ ರೆಸ್ಟೋರೆಂಟ್ ಗಳ ದ್ರವತ್ಯಾಜ್ಯವನ್ನು ದ್ರವತ್ಯಾಜ್ಯ ವಿಲೇವಾರಿ ಘಟಕಕ್ಕೆ ಹರಿಸಲು ಅಳವಡಿಸಲಾಗಿರುವ ಪೈಪ್ ಒಡೆದ ಪರಿಣಾಮ ಕಳೆದ ಆರು ದಿನಗಳಿಂದ ದುರ್ಗಂಧಪೂರಿತ ಹೊಲಸು ನೀರು ರಸ್ತೆಯ ಪಕ್ಕದಲ್ಲಿಯೇ ಹರಿಯುತ್ತಿದ್ದರೂ ಪಂಚಾಯತ್ ನವರು ಅದನ್ನು ಸರಿಪಡಿಸಿಲ್ಲ. ವಾಸನೆಯಿಂದಾಗಿ ಅಕ್ಕಪಕ್ಕದ ಅಂಗಡಿಗಳವರು ಅಂಗಡಿಯಲ್ಲಿ ಕುಳಿತು ವ್ಯಾಪಾರ ನಡೆಸಲು ಸಾಧ್ಯವಾಗುತ್ತಿಲ್ಲ. ಗ್ರಾಹಕರು ಹಾಗೂ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಮಾತ್ರವಲ್ಲದೇ ಕಸ ಸಂಗ್ರಹಕ್ಕೆ ವರ್ತಕರಿಂದ ಶುಲ್ಕ ಪಡೆದುಕೊಳ್ಳುವ ಪಂಚಾಯತ್ ಸಮರ್ಪಕವಾಗಿ ಕಸ ಸಂಗ್ರಹ ನಡೆಸುತ್ತಿಲ್ಲ. ಕಳೆದ ಕೆಲ ದಿನಗಳಿಂದ ಅಂಗಡಿಗಳ ಮುಂದೆ ಇರಿಸಿರುವ ಕಸದ ಚೀಲಗಳನ್ನು ಪಂಚಾಯತ್ ನ ಸ್ವಚ್ಛತಾ ಸಿಬಂದಿ ಕೊಂಡೊಯ್ಯದೇ ಇರುವುದರಿಂದ ಅಂಗಡಿಗಳ ಮುಂದೆ ಕಸದ ಕಟ್ಟುಗಳು ರಾಶಿಬಿದ್ದು ಅಸಹ್ಯ ಹುಟ್ಟಿಸುತ್ತಿದೆ ಎಂದು ವರ್ತಕರು ದೂರಿದ್ದಾರೆ.

Also Read  ಕುಂತೂರು: ಶಾಲೆಗೆಂದು ತೆರಳಿದ ಬಾಲಕ ನಾಪತ್ತೆ

ಪೈಪ್ ಒಡೆದು ಕೊಳಚೆ ನೀರು ಹೊರಬರುತ್ತಿರುವುದರಿಂದ ನಮಗೆ ದುರ್ವಾಸನೆಯಿಂದ ಮೂಗುಬಿಡಲು ಆಗುತ್ತಿಲ್ಲ. ಈ ಕುರಿತು ಪಂಚಾಯತ್ ಗೆ ದೂರು ಸಲ್ಲಿಸಿದರೆ ಬೇಜವಾಬ್ದಾರಿಯ ಉತ್ತರ ನೀಡುತ್ತಿದ್ದಾರೆ. ಅದೇ ರೀತಿ ಕಸ ಸಂಗ್ರಹಿಸುವವರು ಕೂಡ ಕೆಲಸ ಮಾಡುತ್ತಿಲ್ಲ. ನಮ್ಮಿಂದ ತ್ಯಾಜ್ಯ ವಿಲೇವಾರಿ ಶುಲ್ಕ ಸೇರಿದಂತೆ ಎಲ್ಲಾ ತೆರಿಗೆಗಳನ್ನು ಸರಿಯಾಗಿ ಸಂಗ್ರಹಿಸುವ ಪಂಚಾಯತ್ ನವರು ಅವರ ಕೆಲಸ ಮಾಡದೆ ದೂರು ನೀಡಿದವರ ವಿರುದ್ಧವೇ ಹರಿಹಾಯುವುದು ಸರಿಯಲ್ಲ.
– ಅಶ್ರಫ್, ವರ್ತಕ, ಕಡಬ

ಸ್ವಚ್ಛತೆಯ ವಿಚಾರದಲ್ಲಿ ಪ್ರಶಸ್ತಿ ಪಡೆದುಕೊಂಡಿರುವ ಕಡಬ ಪಂಚಾಯತ್ ತ್ಯಾಜ್ಯ ವಿಲೇವಾರಿಯಲ್ಲಿ ಪದೇ ಪದೇ ಮುಗ್ಗರಿಸುತ್ತಿದೆ. ಕಡಬದ ದೈವಗಳ ಮಾಡದ ಬಳಿ ಇರುವ ಸಾರ್ವಜನಿಕ ಬಸ್ ತಂಗುದಾಣದಲ್ಲಿ ಭಿಕ್ಷುಕರು ಹಾಗೂ ಅಲೆಮಾರಿಗಳು ನೆಲೆಯೂರಿ ಗಲೀಜು ಮಾಡುತ್ತಿದ್ದರೂ ಪಂಚಾಯತ್ ವ್ಯವಸ್ಥೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದೀಗ ಕಳೆದ ಕೆಲ ದಿನಗಳಿಂದ ಸದ್ರಿ ಬಸ್ ತಂಗುದಾಣದಲ್ಲಿ ವೃದ್ಧ ವ್ಯಕ್ತಿಯೊಬ್ಬರು ಆಶ್ರಯ ಪಡೆದು ಅಲ್ಲಿ ಮಲ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಸಾರ್ವಜನಿಕರು ಬಸ್ ನಿಲ್ದಾಣದ ಹೊರಗೆ ನಿಂತು ಬಸ್ ಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
– ರಾಜಕುಮಾರ್ ಜೈಭಗವಾನ್, ವರ್ತಕ, ಕಡಬ

Also Read  ಕಡಬ:ಶ್ರೀ ಕೃಷ್ಣಾಷ್ಟಮಿಯ ಸಂಭ್ರಮಾಚರಣೆ ➤ ಇದರ ಪ್ರಯುಕ್ತ ಜರುಗಿದ ಅಟ್ಟಿ ಮಡಿಕೆ ಹೊಡೆಯುವ ಸೊಬಗನ್ನು ನೋಡಲು ಬಂದ ಜನ ಸಾಗರ


ಪ್ರತಿ ತಿಂಗಳು ಸಂಗ್ರಹವಾಗುವ ತ್ಯಾಜ್ಯ ವಿಲೇವಾರಿ ಶುಲ್ಕದ ದುಪ್ಪಟ್ಟು ಖರ್ಚು ಮಾಡಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಮಿಕರ ಸಮಸ್ಯೆಯಿಂದಾಗಿ ತೊಂದರೆ ಎದುರಾಗಿದೆ. ಪೇಟೆಯಲ್ಲಿ ಡ್ರೈನೇಜ್ ಒಡೆದು ದ್ರವತ್ಯಾಜ್ಯ ಹೊರ ಚೆಲ್ಲುತ್ತಿರುವುದನ್ನು ಸರಿಪಡಿಸಲು ಪ್ರಯತ್ನಿಸಲಾಗುತ್ತಿದೆ. ಬುಧವಾರ ರಾತ್ರಿ ಪೈಪ್ ಎಲ್ಲಿ ಒಡೆದಿದೆ ಎಂದು ಪತ್ತೆ ಮಾಡಲು ಕಾರ್ಮಿಕರು ನಡೆಸಿದ ಪ್ರಯತ್ನ ಫಲ ನೀಡಿಲ್ಲ. ನುರಿತ ಕಾರ್ಮಿಕರನ್ನು ಕರೆಸಿ ಪೈಪ್ ಸರಿಪಡಿಸಲಾಗುವುದು. ಪ್ರಸ್ತುತ ಕೊಳಚೆ ನೀರು ಡ್ರೈನೇಜ್ಗೆ ಬಿಡದಂತೆ ಹೊಟೇಲ್ ಮಾಲಕರಿಗೆ ನೊಟೀಸ್ ನೀಡಲಾಗಿದೆ.
– ಚೆನ್ನಪ್ಪ ಗೌಡ ಕಜೆಮೂಲೆ, ಕಡಬ ಪಂಚಾಯತ್ ಪಿಡಿಒ

error: Content is protected !!
Scroll to Top