(ನ್ಯೂಸ್ ಕಡಬ) com ಜು. 26. ಸಿಬಿಎಸ್‌ಇ ಮಾದರಿಯಲ್ಲಿ ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಪಾಸ್ ಅಂಕಗಳ ಪ್ರಮಾಣವನ್ನು ಆಂತರಿಕ ಮೌಲ್ಯಮಾಪನದ ಅಂಕಗಳನ್ನೊಳನ್ನು ಸೇರಿಸಿ ಶೇ.33ಕ್ಕೆ ಇಳಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಕರಡು ನಿಯಮಾವಳಿ ಅಧಿಸೂಚನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಸಗಿ ಶಾಲಾ ಸಂಘಟನೆಗಳು, ಪೋಷಕರು ಹಾಗೂ ಶಿಕ್ಷಕ ಸಂಘಟನೆಗಳು ಈ ನಡೆ ಸ್ವಾಗತಿಸಿದರೆ, ಕೆಲ ಶಿಕ್ಷಣದ ತಜ್ಞರು ಶೈಕ್ಷಣಿಕ ದಿವಾಳಿತನಕ್ಕೆ ಇದು ಕೈಗನ್ನಡಿ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್, ಇದು ರಾಜ್ಯದ ಲಕ್ಷಾಂತರ ಮಕ್ಕಳಿಗೆ ಆಗುತ್ತಿದ್ದ ಅನ್ಯಾಯ ಸರಿಪಡಿಸುವ ಕ್ರಮ. ಇದು ಅತ್ಯಂತ ಸ್ವಾಗತಾರ್ಹ. ಇದರ ಜೊತೆ ಪ್ರಥಮ ಭಾಷಾ ವಿಷಯದ ಪರೀಕ್ಷೆಗೆ ಮಾತ್ರ 125 ಅಂಕ ಇರುವುದನ್ನು ಇತರೆ ಐದು ವಿಷಯಗಳಂತೆ 100 ಅಂಕಗಳಿಗೆ ಇಳಿಸಬೇಕು. ತಪ್ಪು ಗ್ರಹಿಕೆ ಬೇಡ. ಪ್ರಥಮ ಭಾಷೆ ಎಂದರೆ ಕನ್ನಡ ಮಾತ್ರವಲ್ಲ, ಇಂಗ್ಲಿಷ್, ಹಿಂದಿ ಸೇರಿ ಬೇರೆ ಬೇರೆ ಮಕ್ಕಳು ಬೇರೆ ಬೇರೆ ಭಾಷಾ ವಿಷಯಗಳನ್ನು ಪ್ರಥಮ ಭಾಷೆಯಾಗಿ ಓದುತ್ತಾರೆ. ಸಿಬಿಎಸ್‌ಇ, ಐಸಿಎಸ್‌ಇ ಸೇರಿ ಇಡೀ ದೇಶದಲ್ಲಿ ಎಲ್ಲೂ ಇಲ್ಲದ ಹೆಚ್ಚುವರಿ ಅಂಕದ ಪರೀಕ್ಷೆ ನಮ್ಮಲ್ಲಿ ಏಕೆ? ಇದನ್ನು ಕೂಡ ಪರಷ್ಕರಿಸಬೇಕು ಎಂದು ಮನವಿ ಮಾಡಿದ್ದಾರೆ.













