ಕೇಂದ್ರ ಸರ್ಕಾರದಿಂದ ಎಸ್‌ಸಿ-ಎಸ್‌ಟಿ, ಮಹಿಳೆಯರಿಗೆ 2,946 ಕೋಟಿ ಸಾಲ- ಸಂಸದ ಕ್ಯಾ. ಚೌಟ ಶ್ಲಾಘನೆ

(ನ್ಯೂಸ್‌ ಕಡಬ) newskadaba.com ಜು. 22: ಕೇಂದ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು , ಎಸ್‌ಸಿ-ಎಸ್‌ಟಿ ಹಾಗೂ ಮಹಿಳಾ ಉದ್ದಿಮೆದಾರರನ್ನು ಉತ್ತೇಜಿಸುವ ‘ಸ್ಟ್ಯಾಂಡ್‌ ಅಪ್‌ ಇಂಡಿಯಾ’ ಯೋಜನೆಯಡಿ ಇಡೀ ದೇಶದಲ್ಲೇ ಕರ್ನಾಟಕ ರಾಜ್ಯಕ್ಕೆ ಅತಿಹೆಚ್ಚಿನ ಸಾಲದ ನೆರವು ನೀಡಿದೆ. ಈ ಯೋಜನೆಯಡಿ 2018 ರಿಂದ ಈಚೆಗೆ ಒಟ್ಟು 2,946 ಕೋಟಿ ರೂ. ಬ್ಯಾಂಕ್‌ ಸಾಲವನ್ನು ಮಂಜೂರು ಮಾಡಲಾಗಿದ್ದು, ಆ ಮೂಲಕ ಸ್ಟ್ಯಾಂಡ್‌ ಅಪ್‌ ಇಂಡಿಯಾ ಯೋಜನೆ ಫಲಾನುಭವಿಗಳ ಪಟ್ಟಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.

ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಲೋಕಸಭೆಯಲ್ಲಿ ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ನೀಡಿರುವ ಲಿಖಿತ ಉತ್ತರದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಹಣಕಾಸು ಸಚಿವಾಲಯ ನೀಡಿರುವ ಉತ್ತರದ ಪ್ರಕಾರ, ಸ್ಟ್ಯಾಂಡ್‌ ಅಪ್‌ ಇಂಡಿಯಾ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ.

ಹಿಂದುಳಿದ ಸಮುದಾಯಗಳನ್ನು ಸ್ವಂತ ಉದ್ಯಮ ಸ್ಥಾಪಿಸಿ ಸ್ವಾವಲಂಬಿಯಾಗಿಸುವ ಮೂಲಕ ಯುವ ಉದ್ದಿಮೆದಾರರನ್ನು ತಯಾರಿಸುವಲ್ಲಿ ಸ್ಟ್ಯಾಂಡ್‌ ಅಪ್‌ ಇಂಡಿಯಾ ಯೋಜನೆಯಡಿ ಬ್ಯಾಂಕ್‌ಗಳಿಂದ ಕರ್ನಾಟಕಕ್ಕೆ ಹೆಚ್ಚಿನ ಸಾಲದ ನೆರವನ್ನು ಕೇಂದ್ರ ಸರ್ಕಾರ ನೀಡಿದೆ. 2018ರ ಏಪ್ರಿಲ್‌ನಿಂದ 2025ರ ಮಾರ್ಚ್‌ ಅವಧಿಯಲ್ಲಿ ಒಟ್ಟು 13,389 ಸಾಲದ ಖಾತೆಗಳನ್ನು ಹೊಂದಿವೆ. ಈ ಯೋಜನೆಯು 2016ರಲ್ಲಿ ಪ್ರಾರಂಭವಾಗಿದ್ದು, ಇಲ್ಲಿವರೆಗೆ 16,846 ಸಾಲದ ಖಾತೆಗಳನ್ನು ಹೊಂದುವ ಮೂಲಕ ಒಟ್ಟು 3,750.40 ಕೋಟಿ ರೂ. ಸಾಲವನ್ನು ಸ್ಟ್ಯಾಂಡ್‌ ಅಪ್‌ ಇಂಡಿಯಾ ಯೋಜನೆಯಡಿ ಕರ್ನಾಟಕದ ಅರ್ಹ ಫಲಾನುಭವಿಗಳು ಪಡೆದುಕೊಂಡಿದ್ದಾರೆ.

 

Scroll to Top