(ನ್ಯೂಸ್ ಕಡಬ) newskadaba.com, ಜು. 21. ಬೆಂಗಳೂರು: ಧರ್ಮಸ್ಥಳ ಪ್ರಕರಣದ ಕುರಿತು ಎಸ್‌ಐಟಿ (SIT) ತನಿಖೆಗೆ ನೀಡಿರುವುದನ್ನು ಸ್ವಾಗತ ಮಾಡುತ್ತೇವೆ. ಕಾಲಮಿತಿಯಲ್ಲಿ ಕಾನೂಬದ್ಧವಾಗಿ ಎಸ್‌ಐಟಿ ತನಿಖೆಯಾಗಬೇಕು. ಯಾರನ್ನೋ ಗುರಿಯಾಗಿಸಿಕೊಂಡು ತನಿಖೆ ನಡೆಯಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಬಗ್ಗೆ ಸ್ಥಳೀಯರು ಹಾಗೂ ಅಲ್ಲಿ ಬಹಳ ದಿನಗಳವರೆಗೆ ಕೆಲಸ ಮಾಡಿರುವ ಪೊಲಿಸರಿಗೆ ಗೊತ್ತಿರುತ್ತದೆ. ದೂರು ಕೊಟ್ಟವರು ತಮ್ಮ ಮೇಲೆ ಒತ್ತಡ ಇದೆ ಎಂದು ಹೇಳಿದ್ದಾರೆ. ದೂರು ಕೊಟ್ಟವರಿಗೆ ಯಾರು ಒತ್ತಡ ಹಾಕಿದ್ದಾರೆ ಎಂದು ಹೇಳಬೇಕು. ಈ ಬಗ್ಗೆ ತನಿಖೆಯಾಗಬೇಕು. ಅಲ್ಲಿ ನಡೆದಿರುವ ಪ್ರಕರಣದ ಬಗ್ಗೆ ಪೊಲಿಸರು ಕ್ರಮ ಕೈಗೊಳ್ಳಬೇಕು. ಧರ್ಮಸ್ಥಳ ಪುರಾತನ ಹಾಗೂ ನಂಬಿಕೆಗೆ ಹೆಸರಾಗಿರುವ ದೇವಸ್ಥಾನ. ಆ ದೇವಸ್ಥಾನದ ಮೇಲಿನ ಜನರ ನಂಬಿಕೆ ಕೆಡಿಸುವ ಕೆಲಸವನ್ನು ಮಾಡಬಾರದು ಎಂದು ಹೇಳಿದರು.









