(ನ್ಯೂಸ್ ಕಡಬ) newskadaba.com ಮಂಗಳೂರು, ಜು. 21. ಬೆಂಗಳೂರು-ಮಂಗಳೂರು-ಕಣ್ಣೂರು ಎಕ್ಸ್ ಪ್ರೆಸ್‌ಗೆ ರಾಣಿ ಅಬ್ಬಕ್ಕ ಹೆಸರಿಡುವಂತೆ ಮತ್ತು ಮಂಗಳೂರು – ಅಯೋಧ್ಯೆ ನಡುವೆ ನೇರ ರೈಲು ಸೇವೆಯನ್ನು ಆರಂಭಿಸುವಂತೆ ಮತ್ತು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.
ಸಂಸದ ಬ್ರಿಜೇಶ್ ಚೌಟ ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ, ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಜನರಿಂದ ನೇರ ರೈಲಿಗಾಗಿ ಬೇಡಿಕೆ ಹೆಚ್ಚುತ್ತಿರುವ ಬಗ್ಗೆ ಗಮನ ಸೆಳೆದಿದ್ದಾರೆ.
ಈ ಎರಡು ನಗರಗಳ ನಡುವಿನ ನೇರ ರೈಲು ಸೇವೆ ಬೆಳೆಯುತ್ತಿರುವ ಪ್ರಯಾಣದ ಅಗತ್ಯಗಳನ್ನು ಪೂರೈಸುವುದಲ್ಲದೆ, ಸಾಂಸ್ಕೃತಿಕ ಕಾರಿಡಾರ್ ಆಗಿ ಹೊರಹೊಮ್ಮಲಿದೆ. ಎರಡು ನಗರಗಳ ನಡುವೆ ನೇರ ರೈಲು ಸೇವೆ ಇಲ್ಲದ ಕಾರಣ ಪ್ರಯಾಣಿಕರು ದೀರ್ಘ ಮತ್ತು ಅನಾನುಕೂಲ ಪ್ರಯಾಣಗಳನ್ನು ಕೈಗೊಳ್ಳಬೇಕಾಗುತ್ತದೆ. ಆಗಾಗ್ಗೆ ಬೆಂಗಳೂರು ಅಥವಾ ಇತರ ಜಂಕ್ಷನ್ ಗಳ ಮೂಲಕ ಪ್ರಯಾಣಿಸಲು 40 ಗಂಟೆಗಳಿಗಿಂತಲೂ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಹಾಸನ, ಅರಸಿಕೆರೆ ಮತ್ತು ಬಳ್ಳಾರಿ ಮೂಲಕ ಅಥವಾ ಕೊಂಕಣ ರೈಲ್ವೆ ಮಾರ್ಗ ಮಡಗಾಂವ್, ಕಲ್ಯಾಣ್, ನಾಗ್ಪುರ ಮೂಲಕ ಮಂಗಳೂರು – ಅಯೋಧ್ಯೆ ನಡುವೆ ವಾರಕ್ಕೊಮ್ಮೆ ಅಥವಾ ಎರಡು ವಾರಗಳಿಗೊಮ್ಮೆ ನೇರ ರೈಲು ಸಂಚಾರ ಆರಂಭಿಸಬೇಕು. ಇದರಿಂದ ಆಧ್ಯಾತ್ಮಿಕ ಪ್ರವಾಸೋದ್ಯಮ, ಸಾಂಸ್ಕೃತಿಕ ಬದಲಾವಣೆ ಮತ್ತು ಸುಲಭ ಪ್ರಯಾಣಕ್ಕೆ ಹೆಚ್ಚು ಉತ್ತೇಜನ ನೀಡಿದಂತಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.













