11 ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯ ► ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್

(ನ್ಯೂಸ್ ಕಡಬ) newskadaba.com ಮುಂಬೈ, ಎ.08. ಶನಿವಾರದಂದು ನಡೆದ ಐಪಿಎಲ್ 11ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 1 ವಿಕೆಟ್‌ಗಳ ರೋಚಕ ಜಯ ಸಾಧಿಸುವ ಮೂಲಕ ಮುನ್ನುಡಿ ಇಟ್ಟಿದೆ.

ಆಲ್‌ರೌಂಡರ್ ಡ್ವೆಯ್ನೆ ಬ್ರಾವೊ ಅವರ (30 ಎಸೆತಗಳಲ್ಲಿ 68 ರನ್) ಅರ್ಧಶತಕ ಹಾಗೂ ಕೇದಾರ್ ಜಾಧವ್ ಸಂದರ್ಭೋಚಿತ ಬ್ಯಾಟಿಂಗ್ ನೆರವಿನಿಂದ ಐಪಿಎಲ್‌ನ ಆರಂಭಿಕ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಯಶ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 165 ರನ್ ಗಳಿಸಿತು. ಗೆಲ್ಲಲು ಕಠಿಣ ಸವಾಲು ಪಡೆದ ಚೆನ್ನೈ 83 ರನ್‌ಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ಮಯಾಂಕ್ ಮರ್ಕಂಡೆ(3-23) ಹಾಗೂ ಹಾರ್ದಿಕ್ ಪಾಂಡ್ಯ (3-24) ಚೆನ್ನೈಗೆ ಆರಂಭದಲ್ಲಿ ಕಡಿವಾಣ ಹಾಕಿದರು. ತಂಡ 118 ರನ್‌ಗೆ 8 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗಿಳಿದ ಬ್ರಾವೊ 30 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸಿದ್ದಲ್ಲದೆ, 9ನೇ ವಿಕೆಟ್‌ಗೆ ತಾಹಿರ್‌ರೊಂದಿಗೆ 41 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಆದರೆ, ತಂಡದ ಗೆಲುವಿಗೆ 1 ಓವರ್‌ನಲ್ಲಿ 7 ರನ್ ಅಗತ್ಯವಿದ್ದಾಗ ಬ್ರಾವೊ ವಿಕೆಟ್ ಒಪ್ಪಿಸಿದರು. ಆಗ ಕೊನೆಯ ಓವರ್‌ನಲ್ಲಿ ತಲಾ 1 ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದ ಕೇದಾರ್ ಜಾಧವ್(ಔಟಾಗದೆ 24) ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ ಚೆನ್ನೈಗೆ ರೋಚಕ ಗೆಲುವು ತಂದುಕೊಟ್ಟರು. ಚೆನ್ನೈ ಇನಿಂಗ್ಸ್ ಆರಂಭಿಸಿದ ಶೇನ್ ವ್ಯಾಟ್ಸನ್(16) ಹಾಗೂ ಅಂಬಟಿ ರಾಯುಡು(22), ಸುರೇಶ್ ರೈನಾ(4),ನಾಯಕ ಎಂಎಸ್ ಧೋನಿ(5), ರವೀಂದ್ರ ಜಡೇಜ(12) ಹಾಗೂ ಹರ್ಭಜನ್ ಸಿಂಗ್(8) ಆರಂಭದಲ್ಲೇ ವಿಫಲರಾದರು.

Also Read  T20 ವಿಶ್ವಕಪ್ ಫೈನಲ್ ಕುರಿತು ಮೊದಲ ಬಾರಿಗೆ ಮೌನ ಮುರಿದ ರಿಷಬ್ ಪಂತ್

error: Content is protected !!
Scroll to Top