(ನ್ಯೂಸ್ ಕಡಬ) newskadaba.com ಕಡಬ, ಜೂ. 28. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ (ನೋಂ) ಕಡಬ ತಾಲೂಕು ಸಮಿತಿ ದ.ಕ ಹಾಗೂ ಸರಸ್ವತೀ ವಿದ್ಯಾಲಯದ ಸಾಹಿತ್ಯ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ಭಾರತೀಯ ಸಾಹಿತ್ಯ ಪರಂಪರೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ಜೂನ್ 27ರಂದು ಸರಸ್ವತೀ ವಿದ್ಯಾಲಯ ಹನುಮಾನ್ ನಗರ ಕೇವಳದ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು.
ವಿಶೇಷ ಉಪನ್ಯಾಸಕರಾಗಿ ಶ್ರೀ ಗಣರಾಜ ಕುಂಬ್ಳೆ, ಪ್ರಾಚಾರ್ಯರು ಶ್ರೀರಾಮಕುಂಜೇಶ್ವರ ಮಹಾವಿದ್ಯಾಲಯ ರಾಮಕುಂಜ ಆಗಮಿಸಿ ಪ್ರಾಚೀನ ಕಾಲದ ಸಾಹಿತ್ಯ, ಮಧ್ಯಕಾಲೀನ ಮತ್ತು ಹೊಸ ಸಾಹಿತ್ಯ, ವಚನ ಸಾಹಿತ್ಯ ಬೆಳೆದು ಬಂದ ರೀತಿಯನ್ನು ಸ್ಪುಟವಾಗಿ ವಿವರಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಕಡಬ ತಾಲ್ಲೂಕು ಘಟಕ ಇದರ ಅಧ್ಯಕ್ಷರಾದ ಶ್ರೀ ಕರುಣಾಕರ ಗೋಗಟೆ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು.
ವೇದಿಕೆಯಲ್ಲಿ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಶೈಲಶ್ರೀ ರೈ ಎಸ್, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯ ಗುರುಗಳಾದ ಶ್ರೀ ವಸಂತ ಕೆ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಂಗಳೂರು ವಿಭಾಗ ಸಂಯೋಜಕರಾದ ಶ್ರೀ ಸುಂದರ ಶೆಟ್ಟಿ ಇಳಂತಿಲ, ಕಡಬ ತಾಲ್ಲೂಕು ಘಟಕದ ಸದಸ್ಯರಾದ ಗಿರೀಶ್ ಚೆನ್ನಕಜೆ, ಕಾಶಿನಾಥ್ ಗೋಗಟೆ, ಶಿಕ್ಷಕ ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಹರಿಪ್ರಿಯಾ ಹರಿದಾಸ್ ಮತ್ತು ಅಶ್ವಿನಿ ಪ್ರಾರ್ಥಿಸಿದರು. ಶಿಕ್ಷಕಿ ಶ್ರೀಮತಿ ಚಂದ್ರಾಕ್ಷಿ ವಂದಿಸಿ ಶ್ರೀಮತಿ ಸೌಮ್ಯ ಕೆಎ ಕಾರ್ಯಕ್ರಮ ನಿರೂಪಿಸಿದರು.









