(ನ್ಯೂಸ್ ಕಡಬ) newskadaba.com ಕಡಬ, ಜೂ. 27. ಸೈಂಟ್ ಜೋಕಿಮ್ಸ್ ಪದವಿ ಪೂರ್ವ ಕಾಲೇಜಿನ ಪ್ರಸ್ತುತ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ನೆರವೇರಿತು.
ಇದರ ಮುಖ್ಯ ಅತಿಥಿಯಾಗಿ ಆಗಮಿಸಿದ ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶಶಿಧರ ಪಳಂಗಾಯ ಅವರು ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಭೌತಿಕವಾದ ಹಾಗೂ ಬೌದ್ಧಿಕವಾದ ಅಂತಸತ್ವ ಇರುತ್ತದೆ. ಅಂತರ್ ಶಕ್ತಿಯನ್ನು ಉದ್ದೀಪನ ಗೊಳಿಸುವ ರಚನಾತ್ಮಕ ಕಾರ್ಯಕ್ರಮಗಳು ಅವರ ಜ್ಞಾನಾತ್ಮಕ ವಿಕಾಸಕ್ಕೆ ನಾಂದಿಯಾಗುತ್ತದೆ. ಕಲಿಕೆ ಅಂಕಗಳ ಮೇಲೆ ಅವಲಂಬಿತವಾಗಿರದೆ ಕೌಶಲ್ಯ ಬೆಳವಣಿಗೆ ಮೂಲಕ ನಡೆದರೆ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ವಂ|ಪ್ರಕಾಶ್ ಪಾವ್ಲ್ ಡಿಸೋಜಾ ರವರು ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ವಿದ್ಯುಕ್ತವಾಗಿ ಸಂಸ್ಥೆಗೆ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಬ್ಯಾಡ್ಜ್ ತೊಡಿಸಿ, ವಿದ್ಯಾರ್ಥಿ ಜೀವನ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಂಡು ಮೇಲೇರುವ ಮೆಟ್ಟಿಲಾಗಬೇಕೆಂದು ಶುಭ ಹಾರೈಸಿದರು.
ಕಾಲೇಜು ಪ್ರಾಂಶುಪಾಲರಾದ ಕಿರಣ್ ಕುಮಾರ್ ಅವರು ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ವೇದಿಕೆಯಲ್ಲಿ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲರಾದ ವಂ|ಸುನಿಲ್ ಪ್ರವೀಣ್ ಪಿಂಟೋ ಉಪಸ್ಥಿತರಿದ್ದರು.
ಹಿಂದಿ ಉಪನ್ಯಾಸಕರಾದ ಮ್ಯಾಥ್ಯು ಇ.ಜೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಸ್ವಾಗತ ಸ್ವೀಕರಿಸಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಮೌಲಿಕ ಉಪನ್ಯಾಸ ನೀಡಿದರು.
ವಿದ್ಯಾರ್ಥಿ ಸಂಘದ ಸಂಯೋಜಕಿ ಸುಜಾ ವಿ.ಜೆ ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿ ಅಭಿನ್ ಬೈಜು ಸ್ವಾಗತಿಸಿ, ಉಪನ್ಯಾಸಕಿ ರಿಯಾ ಸ್ಯಾಮ್ ವಂದಿಸಿದರು. ವಿದ್ಯಾರ್ಥಿನಿ ಖದೀಜತ್ ಶಮ್ಮಾ ಹಾಗೂ ಉಪನ್ಯಾಸಕರಾದ ರಾಜೇಶ್ ಎನ್ ಕಾರ್ಯಕ್ರಮ ನಿರ್ವಹಿಸಿದರು.









