(ನ್ಯೂಸ್ ಕಡಬ) newskadaba.com ಕಡಬ, ಜೂ. 27. ಇಲ್ಲಿನ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಪ್ರವೇಶೋತ್ಸವ ಮತ್ತು ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮವು ಹನುಮಾನ್ ನಗರದ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಕಾರ್ಯದರ್ಶಿಗಳಾದ ಶ್ರೀ ಎಂ ಕೃಷ್ಣ ಭಟ್ ವಹಿಸಿ, ಕಾಡಿನಲ್ಲಿ ಮಲ್ಲಿಗೆ ಹೇಗೆ ಮೌನವಾಗಿ ಅರಳುತ್ತದೆಯೋ ಅದೇ ರೀತಿ ಈ ಸಂಸ್ಥೆಯಲ್ಲಿ ಸಂಸ್ಕಾರ ಅರಳುತ್ತದೆ. ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಅಧ್ಯಕ್ಷರಾದ ಸುರೇಂದ್ರ ಕಿಣಿ ಆಗಮಿಸಿ ಅಗ್ನಿಕುಂಡಕ್ಕೆ ಘೃತಾಹುತಿಯನ್ನು ಮಾಡುವುದರ ಮೂಲಕ ಪ್ರವೇಶೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಯಾವ ಮಕ್ಕಳು ಸಾಯುವ ತನಕ ತನ್ನ ಹೆತ್ತವರ ಜೊತೆ ಇರುತ್ತಾರೆ ಅದುವೇ ದೊಡ್ಡ ಆಸ್ತಿ. ಎಲ್ಲಿ ಸಂಸ್ಕಾರ ಇದೆಯೋ ಅಲ್ಲಿ ದೇವರ ಆಶೀರ್ವಾದವಿರುತ್ತದೆ ಎಂದು ಅತಿಥಿ ನೆಲೆಯಲ್ಲಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷರಾದ ಶ್ರೀ ರವಿರಾಜ್ ಶೆಟ್ಟಿ ಕಡಬ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೋಮ ಕುಂಡಕ್ಕೆ ಹವಿಸ್ಸು ಸಮರ್ಪಣೆ ಮಾಡಿ ಅತಿಥಿಗಳಿಂದ ಸಿಹಿಯನ್ನು ಸ್ವೀಕರಿಸಿ ಆಶೀರ್ವಾದ ಪಡೆದುಕೊಂಡರು.
ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ 11 ಜನ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಶಿವಸುಬ್ರಮಣ್ಯ ಭಟ್, ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಪುಲಸ್ತ್ಯಾ ರೈ, ಮುಖ್ಯ ಶಿಕ್ಷಕಿ ಶೈಲಶ್ರೀ ರೈ ಎಸ್ ಮೊದಲಾದವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಕಾರ್ಯ ನಿರ್ವಹಣಾಧಿಕಾರಿ ಶ್ರೀ ವೆಂಕಟರಮಣ ರಾವ್ ಮಂಕುಡೆ ಪ್ರಸ್ತಾವಿಕ ಮಾತುಗಳನ್ನಾಡಿ ಸಂಸ್ಥೆಯ ಅಭಿವೃದ್ಧಿಗೆ ಕೈಜೋಡಿಸಿದ ದಾನಿಗಳನ್ನು ಸ್ಮರಿಸಿಕೊಂಡರು. ವಿದ್ಯಾರ್ಥಿ ನಾಯಕ ಕೀರ್ತನ್‍ಕುಮಾರ್ ಸ್ವಾಗತಿಸಿ, ಉಪನಾಯಕ ಪಿ ಆರ್ ಚೇತನ್ ಗೌಡ ವಂದಿಸಿದರು. ಕುಮಾರಿ ಸಿಂಚನ ಕೆ ಎಸ್ ಕಾರ್ಯಕ್ರಮ ನಿರ್ವಹಿಸಿದರು.









