(ನ್ಯೂಸ್ ಕಡಬ) newskadaba.com ಜೂ. 22. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಪುತ್ತೂರು ನ್ಯಾಯಾಲಯದಲ್ಲಿ ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ.
ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶವಿದೆ. ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಪುತ್ತೂರಿನ 6 ನ್ಯಾಯಾಲಯದಲ್ಲಿ 7 ಸಾವಿರಕ್ಕೂ ಅಧಿಕ ಪ್ರಕರಣ ಇತ್ಯರ್ಥಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಗೌ. ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯದ ನ್ಯಾಯಧೀಶೆ ಪ್ರಕೃತಿ ಕಲ್ಯಾಣ್ ಪುರ ತಿಳಿಸಿದ್ದಾರೆ.
ಅವರು ಈ ಬಗ್ಗೆ ಶನಿವಾರದಂದು ಮಾದ್ಯಮದೊಂದಿಗೆ ಮಾತನಾಡಿ, ಜನರಿಗೆ ಲೋಕಅದಾಲತ್ ಬಗ್ಗೆ ತಿಳಿಯುವಂತೆ ಮಾಡಲು ಸ್ಥಳೀಯಾಡಳಿತದ ಕಸ ವಿಲೇವಾರಿ ವಾಹನಕ್ಕೆ ಒಂದು ಆಡಿಯೋ ತುಣುಕನ್ನು ನೀಡಲಾಗಿದ್ದು, ಈ ಮೂಲಕ ಪ್ರತಿ ಮನೆಗೆ ಅದಾಲತ್ ಮಾಹಿತಿ ತಲುಪಿಸುವ ಪ್ರಯತ್ನ ಮಾಡಲಾಗಿದೆ. ಅದಾಲತ್ತಿನಲ್ಲಿ ಜನರು ಹೆಚ್ಚು ಭಾಗವಹಿಸಿದಾಗ ನ್ಯಾಯಾಲಯದ ಮೇಲಿರುವ ಒತ್ತಡವೂ ಕಡಿಮೆಯಾಗುತ್ತದೆ. ರಾಜಿ ಸಂಧಾನ ಮಾಡಿ ಪ್ರಕರಣಗಳನ್ನು ಇತ್ಯರ್ಥ ಮಾಡುವುದರಿಂದ ಹಣ ಮತ್ತು ಸಮಯದ ಉಳಿತಾಯ ಮಾನಸಿಕ ನೆಮ್ಮದಿ ಮತ್ತು ತ್ವರಿತ ನ್ಯಾಯಾಧಾನ ಸಿಗಲಿದೆ.
ಅದಾಲತ್ ನಲ್ಲಿ ಹೆಚ್ಚಿನ ಪ್ರಕರಣಗಳು ಇತ್ಯರ್ಥವಾಗಲು ಎಲ್ಲರ ಸಹಕಾರದ ಅಗತ್ಯವಿದ್ದು, ಹಣಕಾಸು ಸಂಸ್ಥೆಗಳು, ಪೊಲೀಸ್, ಆರ್.ಟಿ.ಓ. ಪುರಸಭೆ ಅಧಿಕಾರಿಗಳು, ತಹಶೀಲ್ದಾರ್, ವಕೀಲರು ಹಾಗೂ ಇನ್ಸೂರೆನ್ಸ್ ಕಂಪೆನಿಗಳ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಗಳನ್ನು ಮಾಡಲಾಗಿದೆ. ಹಣಕಾಸು ಸಂಸ್ಥೆಗಳಿಗೆ ಬಡ್ಡಿ ಹಣದಲ್ಲಿ ರಿಯಾಯಿತಿ ನೀಡಿ ಸಹಕರಿಸಬೇಕು ಎಂದು ಕೇಳಿಕೊಳ್ಳಲಾಗಿದೆ.
ಸಾಲಗಾರರ ಮನವೊಲಿಸುವ ಪ್ರಯತ್ನಗಳನ್ನು ಕೂಡ ಮಾಡುವಂತೆ ಅಧಿಕಾರಿಗಳಿಗೆ ಮತ್ತು ವಕೀಲರಿಗೆ ಹೇಳಲಾಗಿದೆ ಎಂದು ಹೇಳಿದರು.
ಗೌ. ಪ್ರಧಾನ ವ್ಯವಹಾರಿಕ ನ್ಯಾಯಾಲಯದ ನ್ಯಾಯಧೀಶರಾದ ಶಿವಣ್ಣ ಎಚ್. ಆರ್., ಯೋಗೇಂದ್ರ ಶೆಟ್ಟಿ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಿ. ಜಗನ್ನಾಥ ರೈ ಮೊದಲಾದವರು ಉಪಸ್ಥಿತರಿದ್ದರು.









