(ನ್ಯೂಸ್ ಕಡಬ) newskadaba.com ಜೂ. 21. ಮನುಷ್ಯನಲ್ಲಿ ದೇಶಪ್ರೇಮ ಬೆಳೆಸಲು ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಶಾಲಾ ಹಂತದಲ್ಲಿ ವಿವಿಧ ಸಂಘಗಳು ಸಹಕಾರಿಯಾಗಲಿವೆ ಎಂದು ಕುಮಾರಸ್ವಾಮಿ ವಿದ್ಯಾಲಯದ ಗಣಿತ ಶಿಕ್ಷಕರಾದ ಆನಂದರವರು ನುಡಿದರು.
ಶ್ರೀ ಗೋಪಾಲಕೃಷ್ಣ ವಿದ್ಯಾಲಯದ ವಿವಿಧ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಸ್ತು ಮತ್ತು ಸಾಮಾಜಿಕ ಪ್ರಜ್ಞೆ ಉತ್ತಮ ನಾಯಕತ್ವ ಬೆಳೆಸಲು ಸಂಘಗಳು ಸಹಾಯ ಮಾಡುತ್ತದೆ. ಇಂದು ವಿದ್ಯಾವಂತರಿಂದ ಸಮಾಜಘಾತುಕ ಕೆಲಸಗಳು ನಡೆಯುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ಇದಕ್ಕೆ ಅವಕಾಶ ಮಾಡಿಕೊಡದೇ ಉತ್ತಮ ಆಲೋಚನೆಯೊಂದಿಗೆ ಹಿರಿಯರ ಅನುಭವದ ಮಾತುಗಳನ್ನು ಗೌರವಿಸಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಆಡಳಿತ ಮಂಡಳಿ ಕಾರ್ಯದರ್ಶಿಗಳಾದ ಶ್ರೀ ಕೃಷ್ಣಶರ್ಮ ಇವರು ವಿವಿಧ ಸಂಘಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು, ಪಠ್ಯದಲ್ಲಿ ಕಲಿತ ಸಂಗತಿಗಳನ್ನು ನಿಜ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುವುದನ್ನು ಹೇಳಿಕೊಟ್ಟರು.
ಈ ಸಂದರ್ಭದಲ್ಲಿ ಸಾಹಿತ್ಯ ಸಂಘದ ಅಧ್ಯಕ್ಷರಾದ ಶ್ರೇಯ, ಕಲಾ ಸಂಘದ ಅಧ್ಯಕ್ಷರಾದ ಕೀರ್ತನಾ ವಿನೋದ್, ವಿಜ್ಞಾನ ಮತ್ತು ಪರಿಸರ ಸ್ನೇಹಿ ಸಂಘದ ಅಧ್ಯಕ್ಷರಾದ ಚೈತನ್ಯ ಡಿ ಎಂ, ಕ್ರೀಡಾ ಸಂಘದ ಅಧ್ಯಕ್ಷರಾದ ಸೌಜನ್ಯ.ಕೆ, ಶಾಲಾ ವಿದ್ಯಾರ್ಥಿ ನಾಯಕ ನಮನ್.ಸಿ.ಎಲ್ ಉಪಸ್ಥಿತರಿದ್ದರು.
ಮುಖ್ಯ ಗುರುಗಳಾದ ಸತ್ಯಶಂಕರ್ ಎಂ ಸ್ವಾಗತಿಸಿದರು. ಶಿಕ್ಷಕಿ ಮಾಲಿನಿ ಎಂ ವಂದಿಸಿದರು. ಶಿಕ್ಷಕಿ ಲಕ್ಷ್ಮೀ ಈರಕ್ಕನವರ್ ಕಾರ್ಯಕ್ರಮ ನಿರೂಪಿಸಿದರು.









