(ನ್ಯೂಸ್ ಕಡಬ) newskadaba.com ಜೂ. 21. ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಎಸ್.ಸಿ.ಎಸ್. ಆಸ್ಪತ್ರೆಯ ಸಭಾಂಗಣದಲ್ಲಿ ಇಂದು ಆಯೋಜಿಸಲಾಯಿತು. ಯುವ ಪೀಳಿಗೆಯು ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಹಾಗೂ ತಮ್ಮ ಜೀವನಶೈಲಿಯನ್ನು ಯೋಗಾಭ್ಯಾಸದ ಮೂಲಕ ಸುಧಾರಿಸುವ ನಿಟ್ಟಿನಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಅತ್ಯಂತ ಉತ್ಸಾಹಭರಿತರಾಗಿ ಭಾಗವಹಿಸಿದರು.
ಅಂತರಾಷ್ಟ್ರೀಯ ಯೋಗ ಗುರು ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರ ನೇತೃತ್ವದಲ್ಲಿ ಯೋಗ ತರಬೇತಿಯನ್ನು ಆಯೋಜಿಸಲಾಯಿತು. ಕಳೆದ 47 ವರ್ಷಗಳಿಂದ ಮೂರುವರೆ ಲಕ್ಷಕ್ಕೂ ಅಧಿಕ ಜನರಿಗೆ ಉಚಿತ ಯೋಗ ತರಬೇತಿ ನೀಡಿ ಅತ್ಯುತ್ತಮ ಸೇವೆಯನ್ನು ನೀಡಿದ್ದಾರೆ.
ಆಸ್ಪತ್ರೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದಂತಹ ಡಾ. ಜೀವರಾಜ್ ಸೊರಕೆಯವರು ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಬಹುತೇಕ ಜನರು ಒತ್ತಡಭರಿತ, ಆತಂಕ ಹಾಗೂ ಅಸಮತೋಲಿತ ಜೀವನಶೈಲಿಯಿಂದ ಬಳಲುತ್ತಿದ್ದಾರೆ. ನಿಯಮಿತ ಯೋಗಾಭ್ಯಾಸದಿಂದ ವ್ಯಕ್ತಿಯು ತನ್ನ ಅಂತರಂಗದ ಜೊತೆಗೆ ಸಂಪರ್ಕ ಸಾಧಿಸಲು, ಮಾನಸಿಕ ಸಮತೋಲನವನ್ನು ಹಿಂಪಡೆದುಕೊಳ್ಳಲು ಹಾಗೂ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗುತ್ತದೆ. ನಮ್ಮ ಮನೋವೈಕಲ್ಯ ಹಾಗೂ ಮಾನಸಿಕ ಕಳವಳವನ್ನು ಕಡಿಮೆ ಮಾಡುವುದು ಮಾತ್ರವಲ್ಲದೇ ಶಾರೀರಿಕ ದೌರ್ಬಲ್ಯದಿಂದ ದೂರವಿರಲು ಸಹಾಯಕವಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಯುವಜನತೆಯನ್ನು ಯೋಗಾಭ್ಯಾಸದಲ್ಲಿ ತೊಡಗುವಂತೆ ಹುರಿದುಂಬಿಸಲಾಗುತ್ತದೆ, ನಿರಂತರ ಯೋಗಾಭ್ಯಾಸವು ಆರೋಗ್ಯ ಮತ್ತು ಸಂತೋಷ ನೆಮ್ಮದಿಯ ದಾರಿ ಎಂದು ತಿಳಿಹೇಳಿದರು.









