(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಎ.06. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಸ್ಸಿನಲ್ಲಿ ಆಗಮಿಸಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಬೆಂಗಳೂರಿನ ಮಹಿಳೆ ಹಾಗೂ ಮಕ್ಕಳನ್ನು ಕೊಕ್ಕಡದ ಯುವಕರಿಬ್ಬರು ತಮ್ಮ ಸಮಯೋಚಿತ ನಿರ್ಧಾರದಿಂದಾಗಿ ಸಾವಿನ ದವಡೆಯಿಂದ ಪಾರು ಮಾಡಿದ ಘಟನೆ ಬುಧವಾರ ಬೆಳಗ್ಗಿನ ಜಾವ ಧರ್ಮಸ್ಥಳದಲ್ಲಿ ನಡೆದಿದೆ.
ಕೊಕ್ಕಡದ ರಫೀಕ್ ಬೋಳದಬೈಲು ಹಾಗೂ ಅಝೀಜ್ ರವರು ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿ
ಬಸ್ಸಿನಲ್ಲಿ ಧರ್ಮಸ್ಥಳಕ್ಕೆ ಹಿಂತಿರುಗುತ್ತಿದ್ದಾಗ ತಮ್ಮ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಮಹಿಳೆ ಹಾಗೂ ಮಕ್ಕಳು ಅಳುತ್ತಾ ಇರುವುದನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಮಹಿಳೆ ಯಾರೊಂದಿಗೋ ಮೊಬೈಲ್ ನಲ್ಲಿ ಅಳುತ್ತಾ ಮಾತನಾಡಿ, ತಾನು ಮಕ್ಕಳೊಂದಿಗೆ ಸಾಯಲು ಹೊರಟಿದ್ದಾಗಿ ಹೇಳುತ್ತಿದ್ದುದನ್ನು ಗಮನಿಸಿದ ರಫೀಕ್ ಹಾಗೂ ಅಝೀಜ್ ಮಹಿಳೆಯನ್ನು ಮಾತನಾಡಿಸಿದ್ದಾರೆ. ಆಗ ಆಕೆ ತನ್ನ ಹೆಸರು ಚಂದ್ರಕಲಾ ಎಂದಾಗಿದ್ದು, ತನ್ನ ಪತಿ ರಾಮನಗರ ನಿವಾಸಿ ಶಿವಾಜಿ ರಾವ್ ಹೆತ್ತವರ ಕಿರುಕುಳ ತಡೆಯಲಾರದೆ ತನ್ನ ಮಕ್ಕಳಾದ ಭಾವನಾ ಹಾಗೂ ವಿದ್ಯಾಶ್ರೀ ಜತೆಗೆ ಯಾರಲ್ಲೂ ಹೇಳದೆ ಬಂದಿರುವುದಾಗಿ ತಿಳಿಸಿ ಕೊಟ್ಟಿಗೆಹಾರ ಬಳಿ ಬಸ್ಸಿನಿಂದ ಇಳಿದಿದ್ದಾರೆ. ಮಹಿಳೆಯನ್ನು ಹಿಂಬಾಲಿಸಿದ ಯುವಕರಿಗೆ ಮಹಿಳೆಯಲ್ಲಿ ಉಳಿದಿರುವ ಹಣ ಕೇವಲ 20 ರೂ. ಎಂದು ತಿಳಿದಾಗ ಉಪಾಹಾರ ಹಾಗೂ ನೀರು ತೆಗೆದುಕೊಟ್ಟಿದ್ದಾರೆ. ಬಳಿಕ ಮಹಿಳೆಯ ಪತಿಯ ಮೊಬೈಲ್ ಸಂಖ್ಯೆ ಪಡೆದುಕೊಂಡು ಕರೆ ಮಾಡಿ ವಿಷಯ ತಿಳಿಸಿದ್ದು, ಮಹಿಳೆಯ ಪತಿ ಕೂಡಲೇ ಬೆಂಗಳೂರಿನಿಂದ ಹೊರಟು ಬರುವುದಾಗಿ ತಿಳಿಸಿದ್ದಲ್ಲದೆ ಆ ತನಕ ಪತ್ನಿ ಮತ್ತು ಮಕ್ಕಳನ್ನು ರಕ್ಷಿಸಲು ಮನವಿ ಮಾಡಿಕೊಂಡಿದ್ದಾರೆ.
ಯುವಕರು ಮಹಿಳೆ ಮತ್ತು ಮಕ್ಕಳೊಂದಿಗೆ ಧರ್ಮಸ್ಥಳಕ್ಕೆ ತೆರಳಿದ್ದಾರೆ. ಬೆಳ್ತಂಗಡಿ ತಾಲೂಕು ಕೋಮು ಸೂಕ್ಷ್ಮ ಪ್ರದೇಶವಾಗಿದ್ದರಿಂದ ತಪ್ಪು ತಿಳುವಳಿಕೆಯಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಬಾರದು ಎನ್ನುವ ಮುಂಜಾಗ್ರತೆಯಿಂದ ಕೊಕ್ಕಡದ ವಿಜಯ ಕರ್ನಾಟಕ ವರದಿಗಾರ ಸುಬ್ರಹ್ಮಣ್ಯ ಶಗ್ರಿತ್ತಾಯರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾಧ್ಯಮ ವರದಿಗಾರರು ಮಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಮಕ್ಕಳೊಂದಿಗೆ ಬಸ್ಸಿನಿಂದ ಇಳಿಯುವ ಹೊತ್ತಿಗೆ ಪೊಲೀಸ್ ವಾಹನ ಸಿದ್ಧವಾಗಿದ್ದು, ಅವರನ್ನು ಪೊಲೀಸ್ ಸುಪರ್ದಿಗೆ ಒಪ್ಪಿಸಲಾಯಿತು. ಬುಧವಾರ ಬೆಳಗ್ಗೆ ಬೆಂಗಳೂರಿನಿಂದ ಬಂದ ಪತಿಯ ಜತೆಯಲ್ಲಿ ಮಹಿಳೆ ಹಾಗೂ ಮಕ್ಕಳನ್ನು ಕಳುಹಿಸಿಕೊಡಲಾಗಿದೆ. ಮಕ್ಕಳೊಂದಿಗೆ ಸಾಯಲು ಹೋಗುತ್ತಿದ್ದೇನೆ ಅನ್ನುವ ಮಹಿಳೆಯ ಮಾತುಗಳನ್ನು ಕೇಳಿಸಿಕೊಂಡು ಸಮಯೋಚಿತವಾಗಿ ವರ್ತಿಸಿ ಮೂರು ಜೀವಗಳನ್ನು ಉಳಿಸಿದ ಯುವಕರ ಕಾರ್ಯಕ್ಕೆ ಸಮಯೋಚಿತ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೆಚ್ಚುಗೆ ಸೂಚಿಸಿದ್ದಾರೆ.
ಮನೆಯಲ್ಲಿ ಹಿಂದಿನ ರಾತ್ರಿ ನಡೆದ ಘಟನೆಯಿಂದ ನನ್ನ ಹೆಂಡತಿ, ಮಕ್ಕಳನ್ನು ಕರೆದುಕೊಂಡು ಹೋಗಿದ್ದು, ಎಲ್ಲಿ ಹೋಗಿದ್ದಾರೆ ಅನ್ನುವ ಮಾಹಿತಿಯೇ ನಮಗೆ ಇರಲಿಲ್ಲ. ಕೊಕ್ಕಡದ ಯುವಕರ ಸಾಂತ್ವನದಿಂದ ಹೆಂಡತಿ ಮಕ್ಕಳನ್ನು ಮರಳಿ ಪಡೆಯುವಂತಾಯಿತು. ರಕ್ಷಿಸಿದ ಯುವಕರಿಗೆ ಒಳಿತಾಗಲಿ ಎಂದು ಮಹಿಳೆಯ ಪತಿ ಶಿವಾಜಿ ರಾವ್ ತಿಳಿಸಿದ್ದಾರೆ.