ಕೆಂಪುಕಲ್ಲು ಮತ್ತು ಮರಳು ಕೊರತೆ- ಕಟ್ಟಡ ಕಾರ್ಮಿಕರ ಸಂಕಷ್ಟಕ್ಕೆ ಪರಿಹಾರ ಒದಗಿಸುವಂತೆ ಸರಕಾರಕ್ಕೆ ಮನವಿ



(ನ್ಯೂಸ್ ಕಡಬ) newskadaba.com ಜೂ. 19. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೆಂಪು ಕಲ್ಲು, ಮರಳು ಹಾಗೂ ಜಲ್ಲಿಯ ಕೊರತೆಯಿಂದಾಗಿ ಕೂಲಿ ಕಾರ್ಮಿಕರು ತೊಂದರೆ ಅನುಭವಿಸುಂತಾಗಿದ್ದು, ಮನೆ ನಿರ್ಮಾಣದಲ್ಲಿ ತೊಡಗಿಸಿಕೊಂಡವರು ಸಾಮಗ್ರಿಗಳ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿ ದಾರಿ ಕಾಣದಂತಾಗಿದ್ದಾರೆ. ಇದರಿಂದ ಕಟ್ಟಡ ಕಾರ್ಮಿಕರು ಸೇರಿದಂತೆ ಕಟ್ಟಡ ಸಾಮಗ್ರಿಗಳ ಮಳಿಗೆಯ ಮಾಲೀಕ ಹಾಗೂ ಕಾರ್ಮಿಕರಿಗೂ ಕೆಲಸವಿಲ್ಲದಂತಾಗಿದ್ದು, ಜೀವನದ ದಾರಿ ದುಸ್ತರವಾಗಿದೆ.







ನಿಗದಿತ ಅವಧಿಯಲ್ಲಿ ನಡೆಯಬೇಕಾಗಿದ್ದ ಸರಕಾರಿ ವಲಯದ ಕಾಮಗಾರಿಗಳು ಸಾಮಾಗ್ರಿಗಳ ಕೊರತೆಯಿಂದಾಗಿ ಅರ್ಧಕ್ಕೆ ನಿಂತಿದ್ದು, ಇದನ್ನು ನಂಬಿಕೊಂಡಿರುವ ಕೂಲಿ ಕಾರ್ಮಿಕ ವಾಹನ ಚಾಲಕ-ಮಾಲಕರು ಕಂಗಾಲಾಗಿದ್ದಾರೆ. ಮಳೆಗಾಲದಲ್ಲಿ ಕಟ್ಟಡ ನಿರ್ಮಾಣದ ಕೆಲಸಗಳು ನಡೆಯದೇ ಇರುವ ಸಂದರ್ಭದಲ್ಲಿ ಗ್ರಾಮೀಣ ಭಾಗದ ಕಟ್ಟಡ ಕಾರ್ಮಿಕರು ಸಹಜವಾಗಿ ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಕಳೆದ ಬಾರಿಯ ಅಡಿಕೆ ಫಸಲಿನಲ್ಲಿ ವ್ಯತ್ಯಯವಾಗಿದ್ದು, ಅಡಿಕೆ ಬೆಳೆಗಾರರು ಅಪಾರ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಕೃಷಿ ಕಾರ್ಮಿಕರ ಮೇಲೂ ಇದು ಪರಿಣಾಮ ಬೀರಿದೆ. ಇದೇ ರೀತಿ ಮುಂದುವರಿದರೆ ಕೃಷಿ ಕಾರ್ಮಿಕರು ಮತ್ತು ಕಟ್ಟಡ ಕಾರ್ಮಿಕರ ಬದುಕು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಲಿದೆ.






ಗಂಭೀರವಾಗಿರುವ ಈ ಸಮಸ್ಯೆಯ ಕಡೆ ಸರಕಾರ ಗಮನಹರಿಸಬೇಕಾಗಿದ್ದು, ಸಂಬಂಧಪಟ್ಟ ಇಲಾಖೆಗಳಿಗೆ ಈಗಿರುವ ಕಠಿಣ ಕಾನೂನನ್ನು ಸಡಿಲಗೊಳಿಸುವ ಮೂಲಕ ತಲೆದೋರಿರುವ ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರವನ್ನು ಒದಗಿಸುವಂತೆ ಜಿಲ್ಲಾ ಕಾಂಗ್ರೆಸ್ ನ ಕಾರ್ಮಿಕ ಘಟಕದ ಕಾರ್ಯದರ್ಶಿ ಅಬೂಬಕ್ಕರ್ ಮುಳಾರ್ ಸರಕಾರಕ್ಕೆ ಮನವಿ ಮಾಡಿದ್ದಾರೆ.

error: Content is protected !!
Scroll to Top