ಕರ್ನಾಟಕದಲ್ಲಿ ಕಮಲ್‌ ಹಾಸನ್‌ ಚಿತ್ರ ರಿಲೀಸ್‌ ಇಲ್ಲ



(ನ್ಯೂಸ್ ಕಡಬ) newskadaba.com, ಜೂ.03. ಬೆಂಗಳೂರು: ಕರ್ನಾಟಕದಲ್ಲಿ ಕಮಲ್ ಹಾಸನ್ ಅವರ ಹೊಸ ಸಿನಿಮಾ ʼಥಗ್‌ ಲೈಫ್‌ʼ ಬಿಡುಗಡೆಗೆ ತಾತ್ಕಾಲಿಕ ತಡೆ ಬಿದ್ದಿದೆ. ʼಥಗ್‌ ಲೈಫ್‌ʼ ಬಿಡುಗಡೆಗೆ ಭದ್ರತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಮಂಗಳವಾರ ನಡೆದಿದ್ದು, ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಅರ್ಜಿಯ ಮುಂದಿನ ವಿಚಾರಣೆಯನ್ನು ಜೂನ್‌ 10ಕ್ಕೆ ಮುಂದೂಡಿದ್ದಾರೆ.





ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ಕುರಿತು ಕ್ಷಮೆಯಾಚಿಸದೆ ಮೊಂಡಾಟ ಪ್ರದರ್ಶಿಸುತ್ತಿದ್ದ ಕಮಲ್‌ ಹಾಸನ್‌ಗೆ ಆಘಾತ ಎದುರಾಗಿದೆ. ಸದ್ಯ ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಮಾಡುವುದಿಲ್ಲ. ವಾಣಿಜ್ಯ ಮಂಡಳಿ ಜತೆ ಚರ್ಚೆ ನಡೆಸುತ್ತೇವೆ. ಹೀಗಾಗಿ ಒಂದು ವಾರ ವಿಚಾರಣೆ ಮುಂದೂಡಲು ಥಗ್‌ ಲೈಫ್‌ ನಿರ್ಮಾಣ ಸಂಸ್ಥೆ ರಾಜ್‌ ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಪರ ವಕೀಲರು ಮನವಿ ಮಾಡಿದ್ದು, ರಾಜ್ಯದಲ್ಲಿ ಸದ್ಯ ʼಥಗ್‌ ಲೈಫ್‌ʼ ಬಿಡುಗಡೆ ಮಾಡದಿರಲು ನಿರ್ಧರಿಸಿದ್ದಾರೆ.






ಜೂನ್‌ 5ಕ್ಕೆ ವಿಶ್ವದಾದ್ಯಂತ ಥಗ್‌ ಲೈಫ್‌ ಬಿಡುಗಡೆಯಾಗಲಿದೆ. ಆದರೆ, ಕಮಲ್‌ ಹಾಸನ್‌ ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದ ಅವರ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿತ್ತು. ಹೀಗಾಗಿ ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ಥಗ್‌ ಲೈಫ್‌ ನಿರ್ಮಾಪಕರು ಹೈಕೋರ್ಟ್‌ ಮೊರೆಹೋಗಿದ್ದಾರೆ.

ಕನ್ನಡದ ಬಗ್ಗೆ ಇರುವ ಗೌರವವನ್ನು ಕಮಲ್‌ ಹಾಸನ್‌ ಅವರು ಪತ್ರದ ಮೂಲಕ ವ್ಯಕ್ತಪಡಿಸಿದ್ದಾರೆ. ನಾವು ಭಾಷೆ ಆಧಾರದಲ್ಲಿ ವಿಭಜನೆ ಆಗಬಾರದು. ದೇಶ ಒಂದೇ, ಕನ್ನಡವೂ ಇರಬೇಕು, ತಮಿಳೂ ಇರಬೇಕು ಎಂದು ನಟನ ಪರ ವಕೀಲ ವಕೀಲ ಧ್ಯಾನ್ ಚಿನ್ನಪ್ಪ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು. ಇದಕ್ಕೆ ಜಡ್ಜ್‌ ಪ್ರತಿಕ್ರಿಯಿಸಿ, ಕೋರ್ಟ್‌ ಎಲ್ಲೂ ಕ್ಷಮೆ ಕೇಳಲು ಹೇಳುತ್ತಿಲ್ಲ, ಕರ್ನಾಟಕ ಫಿಲ್ಮ್‌ ಚೇಂಬರ್‌ ಕೇಳುತ್ತಿದೆ ಎಂದು ತಿಳಿಸಿದ್ದಾರೆ.

error: Content is protected !!
Scroll to Top