(ನ್ಯೂಸ್ ಕಡಬ) newskadaba.com, ಮಾ. 25: ಚೆನ್ನೈ: ಕರ್ನಾಟಕದ ಮೇಕೆದಾಟು ಅಣೆಕಟ್ಟು ಯೋಜನೆ ತಡೆಯಲು ಅಗತ್ಯ ಬಿದ್ದರೆ ಕೋರ್ಟಿಗೆ ಹೋಗುವುದಾಗಿ ತಮಿಳು ನಾಡು ಸರಕಾರ ತಿಳಿಸಿದೆ. ಮೇಕೆದಾಟಿನಲ್ಲಿ ಕಾವೇರಿ ನದಿಗೆ ಜಲಾಶಯ ನಿರ್ಮಿಸುವ ಯೋಜನೆಗೆ ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಯೋಜನೆಯನ್ನು ತಡೆಯುವುದಕ್ಕಾಗಿ ಕಾನೂನು ಕ್ರಮ ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಹೇಳಿದ್ದಾರೆ. ಯೋಜನೆಗೆ ಕರ್ನಾಟಕ ಸರ್ಕಾರ ಅನುಮತಿ ಕೋರಿದ ಬೆನ್ನಲ್ಲೇ ಸಚಿವರ ಈ ಹೇಳಿಕೆ ಹೊರಟಿದೆ. 2025-2026ರ ನೀತಿ ಟಿಪ್ಪಣಿಯನ್ನು ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಿ ಮುರುಗನ್ ಈ ಮಾತು ಹೇಳಿದ್ದಾರೆ.
ಮೇಕೆದಾಟು ಯೋಜನೆ ಸಂಬಂಧ ಕರ್ನಾಟಕವು ಇನ್ನೂ ಅಂತಿಮ ಡಿಪಿಆರ್ ಸಲ್ಲಿಸಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಬೆಂಗಳೂರಿಗೆ ಕುಡಿಯುವ ನೀರು ಒದಗಿಸಲು ಕರ್ನಾಟಕವು 67.16 ಟಿಎಂಸಿ ಸಾಮರ್ಥ್ಯದ ಜಲಾಶಯವನ್ನು ನಿರ್ಮಿಸಲು ಪ್ರಸ್ತಾಪಿಸಿದೆ. ಆದರೆ, ನದಿಪಾತ್ರದ ಕೆಳಗಿನ ರಾಜ್ಯವಾದ ತಮಿಳುನಾಡಿನ ಅನುಮತಿಯಿಲ್ಲದೆ ಕರ್ನಾಟಕವು ಯೋಜನೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ. ಈ ಯೋಜನೆಯು ಕರ್ನಾಟಕದಿಂದ ನದಿ ನೀರಿನ ನೈಸರ್ಗಿಕ ಹರಿವಿಗೆ ತಡೆಯೊಡ್ಡಲಿದೆ ಎಂಬುದು ತಮಿಳುನಾಡಿನ ವಾದವಾಗಿದೆ.