(ನ್ಯೂಸ್ ಕಡಬ) newskadaba.com ಡಿ. 28: ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ಹೆಸರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರಿಗೆ ಸಲಹೆ ನೀಡಿದ್ದಾರೆ. ಬೆಳಗಾವಿಯ ಸಿಪಿಇಡಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಕಾಂಗ್ರೆಸ್ ಅಧಿವೇಶನ ರದ್ದುಗೊಳಿಸಿ ಅದೇ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಮನಮೋಹನ್ ಸಿಂಗ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಮನಮೋಹನ್ ಸಿಂಗ್ ಈ ದೇಶ ಕಂಡ ಶ್ರೇಷ್ಠ ಪ್ರಧಾನಿ.
ದೇಶದ ಎಲ್ಲಾ ವರ್ಗದ ಜನರನ್ನು ಕಾಪಾಡಿದ ನಿಜವಾದ ಆರ್ಥಿಕ ತಜ್ಞ ಹಾಗೂ ಕ್ರಾಂತಿಕಾರಿ. ಮುಂದಿನ ಪೀಳಿಗೆಗೆ ಇವರು ಮಾಡಿದ ಆರ್ಥಿಕ ಕ್ರಾಂತಿ ಸೇರಿ ದೇಶಕ್ಕೆ ನೀಡಿದ ಕೊಡುಗೆಗಳನ್ನು ತಲುಪಿಸುವುದೇ ನಿಜವಾದ ಶ್ರದ್ಧಾಂಜಲಿ. ವಿದ್ಯಾರ್ಥಿಗಳು ಇವರ ಆರ್ಥಿಕ ನೀತಿಗಳನ್ನು ಅಧ್ಯಯನ ಮಾಡಿ, ಹೊಸ ಸಂಶೋಧನಾ ಕಾರ್ಯಗಳ ಮೂಲಕ ದೇಶದ ಆರ್ಥಿಕತೆ ಮತ್ತಷ್ಟು ಉತ್ತಮಗೊಳಿಸಲು ಪ್ರಯತ್ನಿಸಬೇಕು ಎಂದರು.