(ನ್ಯೂಸ್ ಕಡಬ) newskadaba.com ಡಿ. 25 ಬಂಟ್ವಾಳ: ಮಂಗಳೂರು ಹಲವು ತಾಂತ್ರಿಕ ವಿದ್ಯಾಲಯಗಳಿಗೆ ಕ್ಯಾಂಪಸ್ ಆಯ್ಕೆಗಾಗಿ ಬರುವ ಬಹುರಾಷ್ಟಿಯ ಕಂಪನಿಗಳು ಈ ಭಾಗದ ವಿದ್ಯಾರ್ಥಿಗಳ ಮೇಲೆ ಹೆಚ್ಚು ವಿಶ್ವಾಸವಿರಿಸಿಕೊಂಡಿರುವುದು ಅವರ ಪ್ರತಿಭೆ ಹಾಗೂ ಕಠಿನ ದುಡಿಮೆಯ ಕಾರಣಕ್ಕೆ.ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕೆಲಸ ಮಾಡುವ ಜತೆಗೆ ಭಾವನಾತ್ಮಕ ಬಾಂಧವ್ಯವನ್ನು ಹೊಂದಿರುವುದು ಕೂಡಾ ಅದಕ್ಕೆ ಕಾರಣ.
ರಾಜ್ಯ ಸರಕಾರ “ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್’ ಕಾರ್ಯಕ್ರಮ ಯೋಜನೆಯನ್ನು ಸ್ಮಾರ್ಟ್ಸಿಟಿ ಮಂಗಳೂರು ನಗರಕ್ಕೂ ವಿಸ್ತರಣೆ ಮಾಡುವಂತೆ ಘೋಷಿಸಿತು. ಇದರಿಂದ ಮಂಗಳೂರು ನಗರದಲ್ಲಿ ಕಳೆದ ೩ ವರ್ಷಗಳಲ್ಲಿ ೧೫೦ಕ್ಕಿಂತಲೂ ಹೊಸ ಐಟಿ, ಕಾಪೋರೇಟ್ ಸಂಸ್ಥೆಗಳು ತಮ್ಮ ನೆಲೆಯನ್ನು ಸ್ಥಾಪಿಸಿದ್ದು ಇದರಿಂದ ೬೦೦೦ಕ್ಕೂ ಹೆಚ್ಚುವರಿ ಉದ್ಯೋಗವಕಾಶಗಳನ್ನು ಸೃಷ್ಟಿ ಮಾಡಿವೆ. ಇದಕ್ಕೆ ಸಿಂಹಪಾಲು ಎಂಬಂತೆ ಮುಕುಂದ್ ಎಂಜಿಎ ರಿಯಾಲ್ಟಿಯು `ವರ್ಟೆಕ್ಸ್ ವರ್ಕ್ಸ್ಪೇಸ್’ ಎಂಬ ಹೊಸ ಪರಿಕಲ್ಪನೆಯಲ್ಲಿ ೧.೫೦ ಲಕ್ಷ ಚ.ಅಡಿಯಲ್ಲಿ ೩೫ಕ್ಕೂ ಹೆಚ್ಚು ಸಂಸ್ಥೆಗಳಿಗೆ ಉಪಕರಣಗಳು, ಉಪಯುಕ್ತತೆಗಳು ಮತ್ತು ಮೂಲಸೌಕರ್ಯಗಳನ್ನು ಕಲ್ಪಿಸಿ ಕೊಟ್ಟು ೨೫೦೦ಕ್ಕೂ ಹೆಚ್ಚುವರಿ ಉದ್ಯೋಗವಕಾಶಗಳನ್ನು ಸೃಷ್ಟಿಸಲು ಕಾರಣವಾಯಿತು. ಮಾತ್ರವಲ್ಲದೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಮಂದಿ ಇದೀಗ ಅದೇ ಕಂಪೆನಿಯಡಿ ಮಂಗಳೂರಿನಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದ ಹಲವಾರು ಸಂಸ್ಥೆಗಳ ವೆಚ್ಚ ಉಳಿತಾಯದೊಂದಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದೆ. ಪ್ರಸ್ತುತ ಹೆಚ್ಚು ಜನಪ್ರಿಯತೆಯನ್ನು ಪಡೆದು ಇದೀಗ ಈ ಪರಿಕಲ್ಪನೆಗೆ ೨೫ಕ್ಕೂ ಹೆಚ್ಚು ಸಂಸ್ಥೆಳಿಂದ ಬಹಳಷ್ಟು ಬೇಡಿಕೆ ಬರತೊಡಗಿದೆ. ವೇಗವಾಗಿ ಪ್ರಗತಿ ಸಾಧಿಸುತ್ತಿರುವ ಮಂಗಳೂರಿನಲ್ಲಿ ೨೦೨೫ರ ವೇಳೆಗೆ ಅನೇಕ ವಿದೇಶಿ ಕಂಪನಿಗಳು, ಐಟಿ ದೈತ್ಯ ಸಂಸ್ಥೆಗಳು ಕಾಲಿರಿಸುವ ನಿರೀಕ್ಷೆಯಿದೆ. ಈ ಮೂಲಕ ಮುಂದಿನ ಎರಡು ವರ್ಷಗಳಲ್ಲಿ ೧೦ ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮುಕುಂದ್ ಎಂಜಿಎ ರಿಯಾಲ್ಟಿ ಸಂಸ್ಥೆಯ ಪಾಲುದಾರ ಗುರುದತ್ ಶೆಣೈ ತಿಳಿಸಿದ್ದಾರೆ.